ವಿಟ್ಲ: ವಿಟ್ಲ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಯೋಜನೆ ಮೂಲಕ ಮುಖ್ಯವಾಗಿ ಸಣ್ಣ ಹಾಗೂ ಅತೀ ಸಣ್ಣ ರೈತರಿಗೆ ಹಾಗೂ ದುರ್ಬಲ ವರ್ಗದವರಿಗೆ ಅಭಿವೃದ್ಧಿಗೆ ಅವಕಾಶ ಕಲ್ಪಿಸಿಕೊಡುವ ಹಾಗೂ ಇಡೀ ಕುಟುಂಬ ಹಾಗೂ ಸ್ವಾವಲಂಭಿಯಾಗುವಂತೆ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಹೇಳಿದರು.

ಅವರು ವಿಟ್ಲ ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ವಿಟ್ಲ ಯೋಜನಾ ವ್ಯಾಪ್ತಿಯಲ್ಲಿ ಒಟ್ಟು 2206 ಪ್ರಗತಿಬಂಧು ಸ್ವಸಹಾಯ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, 17637 ಫಲಾನುಭವಿಗಳಿದ್ದು, ವ್ಯಾಪ್ತಿಯಲ್ಲಿ 6 ವಲಯ, 72 ಒಕ್ಕೂಟಗಳಿವೆ. ಪ್ರಗತಿಬಂಧು ಸ್ವಸಹಾಯ ಸಂಘಗಳ ಪಾಲುದಾರ ಬಂಧುಗಳು ಇದುವರೆಗೂ 13.03 ಕೋಟಿ ಉಳಿತಾಯವನ್ನು ಮಾಡಿದೆ. ಕೃಷಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಕೃಷಿ ತರಬೇತಿ ಮತ್ತು ಪ್ರಾತ್ಯಕ್ಷಿಕೆ 24 ಕಾರ್ಯಕ್ರಮಗಳನ್ನು ನೆಸಲಾಗಿದೆ. ಸ್ವಚ್ಛ ಶ್ರದ್ಧಾಕೇಂದ್ರಗಳ ಪರಿಕಲ್ಪನೆ ನಿಟ್ಟಿನಲ್ಲಿ 82 ಶ್ರದ್ಧಾಕೇಂದ್ರಗಳಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಿದ್ದು, 3140ಮಂದಿ ಭಾಗವಹಿಸಿದ್ದಾರೆ.

ಸಂಪೂರ್ಣ ಸುರಕ್ಷಾ ಕಾರ್ಯಕ್ರಮದಡಿಯಲ್ಲಿ ಪ್ರಸ್ತುತ ವರ್ಷ 8189 ಕುಟುಂಬದ 28983 ಸದಸ್ಯರಿಗೆ ವಿಮೆ ಮಾಡಲಾಗಿದ್ದು, ಪ್ರಸ್ತುತ ವರ್ಷ 326ಮಂದಿ ಸದಸ್ಯರಿಗೆ 2521018 ಮೊತ್ತದ ಸಂಪೂರ್ಣ ಸುರಕ್ಷಾ ವಿಮಾ ಸೌಲಭ್ಯವನ್ನು ಒದಗಿಸಲಾಗಿದೆ. ಅತೀ ನಿರ್ಗತಿಕರನ್ನು ಗುರುತಿಸಿ ಅವರಿಗೆ ಮಾಸಿಕ ಸಹಾಯಧನವನ್ನು ನೀಡಲಾಗುತ್ತಿದ್ದು, ಇದುವರೆಗೂ 56 ಕುಟುಂಬಗಳಿಗೆ 4.64 ಲಕ್ಷದ ನಿರ್ಗತಿಕರ ಮಾಶಾಸನ ವಿತರಿಸಲಾಗಿದೆ.

ವಿಟ್ಲ ಯೋಜನಾ ಕಚೇರಿ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಸಂಭವಿಸಿದ ಪ್ರಾಕೃತಿಕ ದುರಂತ, ನೆರೆ ಹಾವಳಿಯಿಂದ ಹಾನಿಯಾದ ಮತ್ತು ದುರಂತದಲ್ಲಿ ಹಾನಿಗೊಳಗಾದ ಕುಟುಂಬಗಳಿಗೆ 1.10 ಲಕ್ಷ ಸಹಾಯಧನ ನೀಡಲಾಗಿದೆ ಎಂದು ವಿವರಿಸಿದ ಅವರು ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮ, ಜನಜಾಗೃತಿ ಕಾರ್ಯಕ್ರಮ, ಸಮುದಾಯ ಆರೋಗ್ಯ ಕಾರ್ಯಕ್ರಮ, ಜನಮಂಗಳ ಕಾರ್ಯಕ್ರಮ, ಸುಜ್ಞಾನವಿಧಿ ಶಿಷ್ಯವೇತನ, ಜ್ಞಾನ ದೀಪ ಶಿಕ್ಷಕರ ಒದಗಣೆ, ಅನುದಾನ ವಿತರಣೆ, ಪ್ರಗತಿನಿಧಿ ಕಾರ್ಯಕ್ರಮ, ಸಿಡ್ಬಿ ಯೋಜನೆ ಮೊದಲಾದ ಕಾರ್ಯಕ್ರಮಗಳನ್ನು ಡಾ.ವೀರೇಂದ್ರ ಹೆಗ್ಗಡೆ, ಹೇಮಾವತಿ ಹೆಗ್ಗಡೆಯವರ ಆಶೀರ್ವಾದ ಹಾಗೂ ಮಾರ್ಗದರ್ಶನದಲ್ಲಿ, ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್ ಎಚ್ ಮಂಜುನಾಥ ಅವರ ನಿರ್ದೇಶನದಂತೆ ಪ್ರಾದೇಶಿಕ ನಿರ್ದೇಶಕ ವಸಂತ್ ಸಾಲಿಯಾನ್ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಮಾಡಲಾಗಿದೆ ಎಂದು ತಿಳಿಸಿದರು.ಯೋಜನಾಧಿಕಾರಿ ಮೋಹನ್ ಮೋಹನ್ ಕೆ, ವಿಟ್ಲ ಮೇಲ್ವಿಚಾರಕ ರಮೇಶ್, ಜೆವಿಕೆ ಸಮನ್ವಯಾಧಿಕಾರಿ ನಳಿನಾಕ್ಷಿ ಶೆಟ್ಟಿ ಉಪಸ್ಥಿತರಿದ್ದರು.
