


ಸುಬ್ರಹ್ಮಣ್ಯ: ಸ್ಕೂಟರ್ ಸ್ಕಿಡ್ ಆಗಿ ರಸ್ತೆಗೆ ಬಿದ್ದು ತೀವ್ರ ಗಾಯಗೊಂಡಿದ್ದ ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಕಡಬ ತಾಲೂಕಿನ ನೂಜಿಬಾಳ್ತಿಲದಲ್ಲಿ ಸಂಭವಿಸಿದೆ.
ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ನಿಡ್ಡೋ ದಿ.ಪದ್ಮಯ್ಯ ಗೌಡರ ಪುತ್ರ ರಾಮಚಂದ್ರ ಗೌಡ(65) ಮೃತರು.ಮೃತರು ಪತ್ನಿ, ಒರ್ವ ಪುತ್ರ, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.ರಾಮಚಂದ್ರ ಗೌಡ ಅವರು ತನ್ನ ಸ್ಕೂಟರ್ನಲ್ಲಿ ಮಾ.4ರಂದು ಸಂಜೆ ಕಲ್ಲುಗುಡ್ಡೆಯಿಂದ ಎಂಜಿರ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಅರಿಮಜಲು ಎಂಬಲ್ಲಿ ಸ್ಕೂಟರ್ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಸ್ಕೂಟರ್ ಸವಾರ ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದು, ಪರಿಣಾಮ ತಲೆಯ ಬಲಭಾಗ, ಕೆನ್ನೆ ಭಾಗಕ್ಕೆ ಗಾಯವಾಗಿದ್ದು, ಕೂಡಲೇ ಅಲ್ಲಿದ್ದವರು ಗಾಯಾಳುವನ್ನು ಉಪಚರಿಸಿ ಕಡಬ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಲ್ಲಿ ಅವರು ಮಾ.5ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ. ಘಟನೆ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








