“ಅಶೋಕ್ ರೈ ಶಾಸಕತ್ವ ಪುತ್ತಿಲ ನೀಡಿದ ಭಿಕ್ಷೆ” – ಬಿಜೆಪಿ ವಕ್ತಾರ ರಾಜೇಶ್ ಬನ್ನೂರು



ಪುತ್ತೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಹಾಗೂ ಬಿಜೆಪಿ ನಡುವಿನ ಸಣ್ಣ ಭಿನ್ನಾಭಿಪ್ರಾಯವೇ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಶಾಸಕರಾಗಿ ಆಯ್ಕೆಯಾಗಲು ಕಾರಣವಾಗಿದೆ. ಅಶೋಕ್ ರೈ ಅವರಿಗೆ ಶಾಸಕತ್ವ ಎಂಬುದು ಅರುಣ್ ಕುಮಾರ್ ಪುತ್ತಿಲ ನೀಡಿದ ಭಿಕ್ಷೆ ಎಂದು ಪುತ್ತೂರು ಬಿಜೆಪಿ ವಕ್ತಾರ ರಾಜೇಶ್ ಬನ್ನೂರು ಆರೋಪಿಸಿದರು.
ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅರುಣ್ ಕುಮಾರ್ ಪುತ್ತಿಲ ಹಾಗೂ ಬಿಜೆಪಿ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಮುಂದಿನ ದಿನಗಳಲ್ಲಿ ಬಿಜೆಪಿ ಮತ್ತು ಪುತ್ತಿಲ ಜಂಟಿ ಪತ್ರಿಕಾಗೋಷ್ಠಿ ನಡೆಸುವ ಸಾಧ್ಯತೆಯನ್ನೂ ತಳ್ಳಿಹಾಕಲಾಗುವುದಿಲ್ಲ. ಈ ಕುರಿತು ಪಕ್ಷದ ಹೈಕಮಾಂಡ್‌ನೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಶಾಸಕ ಅಶೋಕ್ ರೈ ಅವರು “ಬಿಜೆಪಿ ಅಂಗಡಿ ಬಂದಾಗಲಿದೆ” ಎಂಬ ಹೇಳಿಕೆ ನೀಡಿರುವುದಕ್ಕೆ ತಿರುಗೇಟು ನೀಡಿದ ರಾಜೇಶ್ ಬನ್ನೂರು, ಮುಂದಿನ ಚುನಾವಣೆಯಲ್ಲಿ ಅಶೋಕ್ ರೈ ಅವರೇ ಬಿಜೆಪಿಗೆ ಬರುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಆಗ ಅವರಿರುವ ಅಂಗಡಿಯೇ ಬಂದಾಗಲಿದೆ ಎಂದು ವ್ಯಂಗ್ಯವಾಗಿ ನುಡಿದರು.
ಅಶೋಕ್ ರೈ ಅವರು ತಾನು ಹೇಳಿದ್ದೇ ಸರಿ, ತಾನು ಮಾಡಿದ್ದೇ ಸರಿ ಎಂಬ ಧೋರಣೆ ಹೊಂದಿದ್ದಾರೆ. ಶಂಕರ ಆಳ್ವ, ರಾಮ ಭಟ್, ವಿನಯ ಕುಮಾರ್ ಸೊರಕೆ, ಡಿ.ವಿ. ಸದಾನಂದ ಗೌಡ, ಶಕುಂತಳಾ ಶೆಟ್ಟಿ, ಮಲ್ಲಿಕಾ ಪ್ರಸಾದ್ ಹಾಗೂ ಸಂಜೀವ ಮಠಂದೂರು ಸೇರಿದಂತೆ ಹಲವು ಶಾಸಕರನ್ನು ನೋಡಿದ್ದೇವೆ. ಆದರೆ ಅಶೋಕ್ ರೈ ಅವರಂತಹ ಶಾಸಕರನ್ನು ಎಂದೂ ನೋಡಿಲ್ಲ, ಇನ್ನು ಮುಂದೆ ನೋಡುವ ಅಗತ್ಯವೂ ಇಲ್ಲ ಎಂಬುದಾಗಿ ಟೀಕಿಸಿದರು.
“ಬಿಜೆಪಿಗೆ ಹಿಂದೂ-ಮುಸ್ಲಿಂ ವಿಚಾರ ಮಾತನಾಡಲು ಆಗುತ್ತಿಲ್ಲ, ಆದ್ದರಿಂದ ರಸ್ತೆ ಬದಿಯ ಮಣ್ಣಿನ ರಾಶಿ ನೋಡಲು ಹೋಗುತ್ತಿದ್ದಾರೆ” ಎಂಬ ಶಾಸಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, 1947ರಲ್ಲಿ ದೇಶವನ್ನು ಹಿಂದೂ ಮತ್ತು ಮುಸ್ಲಿಂ ಹೆಸರಿನಲ್ಲಿ ವಿಭಜಿಸಿದ್ದು ಕಾಂಗ್ರೆಸ್. ಆಗ ಬಿಜೆಪಿ ಅಸ್ತಿತ್ವದಲ್ಲೇ ಇರಲಿಲ್ಲ ಎಂದು ಹೇಳಿದರು.
ಮೆಡಿಕಲ್ ಕಾಲೇಜು ಸ್ಥಾಪನೆಗೆ ಮಂಜೂರಾದ ಸೇಡಿಯಾಪು ಜಾಗದಲ್ಲಿ ಅಕ್ರಮವಾಗಿ ಮರಗಳನ್ನು ಕಡಿದಿರುವ ಆರೋಪದ ಕುರಿತು ಯಾರೂ ಮಾತನಾಡುತ್ತಿಲ್ಲ. ಹಾರಾಡಿ ಕಾಂಕ್ರೀಟ್ ರಸ್ತೆ ಕಾಮಗಾರಿಯಲ್ಲಿನ ಲೋಪಗಳನ್ನು ಪರಿಶೀಲಿಸಲು ಬಿಜೆಪಿ ಭೇಟಿ ನೀಡಿದ್ದನ್ನು ಶಾಸಕರು ಲೇವಡಿ ಮಾಡಿರುವುದು ಅವರ ಸ್ಥಾನಮಾನದ ಘನತೆಗೆ ತಕ್ಕದ್ದಲ್ಲ. ಪ್ರತಿಪಕ್ಷವಾಗಿ ಜನರ ಸಮಸ್ಯೆಗಳ ಕುರಿತು ಪ್ರಶ್ನಿಸುವುದು ನಮ್ಮ ಕರ್ತವ್ಯ ಎಂದು ರಾಜೇಶ್ ಬನ್ನೂರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವಿದ್ಯಾಗೌರಿ, ಯುವರಾಜ್ ಪೆರೆಯತ್ತೋಡಿ, ಮಹೇಶ್ ಕೇರಿ, ಸತೀಶ್ ನಾಯ್ಕ್ ಪರ್ಲಡ್ಕ ಹಾಗೂ ಲೋಕೇಶ್ ಚಾಕೋಟೆ ಉಪಸ್ಥಿತರಿದ್ದರು.








