



ಕಡಬ: ಐದು ದಿನಗಳ ಹಿಂದೆ ನಾಪತ್ತೆಯಾಗಿದ್ದ ಸಂದೀಪ್ ಮೃತದೇಹ ಕಾಡಿನೊಳಗೆ ಪತ್ತೆಯಾಗಿದ್ದು, ಸಂದೀಪ್ ನನ್ನು ಕೊಲೆಗೈದು ಕಾಡಿನೊಳಗೆ ಎಸೆದಿರುವ ಬಗ್ಗೆ ವಿಚಾರಣೆ ವೇಳೆ ಬೆಳಕಿಗೆ ಬಂದಿತ್ತು.
ಇದೀಗ ಈ ಪ್ರಕರಣದ ಪ್ರಮುಖ ಆರೋಪಿ ನೆಟ್ಟಣ ಚೆಂಡೆಹಿತ್ತಿಲು ಪ್ರತೀಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ಸಂದೀಪ್ ನ.27 ರಂದು ಬೆಳಿಗ್ಗೆ ಕೆಲಸಕ್ಕೆಂದು ಮನೆಯಿಂದ ಹೋದವನು ಕೆಲಸ ಮುಗಿಸಿ ಸಂಜೆ ಮನೆಗೆ ಬಾರದ ಹಿನ್ನಲೆ ಮನೆಯವರು ಆತ ಕೆಲಸ ಮಾಡುತ್ತಿದ್ದ ಶಾಮಿಯಾನದ ಮಾಲಕರಲ್ಲಿ ವಿಚಾರಿಸಿದಾಗ ಸಂದೀಪ್ ನೆಟ್ಟಣ ಚೆಂಡೆ ಹಿತ್ಲು ಮನೆ ನಿವಾಸಿ ಪ್ರತೀಕ್ ಎಂಬಾತನೊಂದಿಗೆ ಕಾರಿನಲ್ಲಿ ಸಂಜೆ ಹೋಗಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಮನೆಯವರು ಮಗ ನಾಪತ್ತೆಯಾಗಿರುವ ಬಗ್ಗೆ ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಂತರ ಪ್ರತೀಕ್ ನಲ್ಲಿ ಸಂದೀಪ್ ಬಗ್ಗೆ ವಿಚಾರಿಸಿದಾಗ ಆತನು ಸಮಂಜಸ ಉತ್ತರ ನೀಡದೇ ಸಂಶಯಾಸ್ಪದವಾಗಿ ವರ್ತಿಸಿರುತ್ತಾನೆ. ಹೆಚ್ಚಿನ ವಿಚಾರಣೆ ವೇಳೆ ಆರೋಪಿ ಪ್ರತೀಕ್ ಬಣ್ಣ ಬಯಲಾಗಿದ್ದು, ಆರೋಪಿ ಸಂದೀಪ್ ನೀಡಿದ ಮಾಹಿತಿಯಂತೆ ಪ್ರತೀಕ್ ನ ಮೃತದೇಹ ಕಡಬ ಕೊಂಬಾರು ಗ್ರಾಮದ ನಾರಡ್ಕ ರಕ್ಷಿತಾರಣ್ಯದಲ್ಲಿ ಪತ್ತೆಯಾಗಿರುತ್ತದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ : 104/2024.ಕಲಂ:103(1) BNS-2023 ಪ್ರಕರಣ ದಾಖಲಾಗಿರುತ್ತದೆ. ಆರೋಪಿ ಪ್ರತೀಕ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ಪಡೆಯಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.








