Friday, June 12, 2026
spot_imgspot_img
spot_imgspot_img

ದೆಹಲಿಯ ಬಹುಮಹಡಿ ಕಟ್ಟಡದಲ್ಲಿ ಅಗ್ನಿ ದುರಂತ – ಮೂವರು ಸಾವು, ಕೆಲವರು ಗಂಭೀರ

- Advertisement -
- Advertisement -

ನವದೆಹಲಿ: ಬಹುಮಹಡಿ ವಸತಿ ಕಟ್ಟಡವೊಂದರಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಮೂವರು ಸಾವನ್ನಪ್ಪಿರುವ ಘಟನೆ ದೆಹಲಿಯ ತುಘಲಕಾಬಾದ್ ಪ್ರದೇಶದಲ್ಲಿ ನಡೆದಿದೆ.

22 ವರ್ಷದ ಯುವಕ ಹಾಗೂ ಇಬ್ಬರು ಮಹಿಳೆಯರು ಅಗ್ನಿ ಅವಘಡದಲ್ಲಿ ಮೃತಪಟ್ಟವರು. ಘಟನೆಯಲ್ಲಿ ಗಾಯಗೊಂಡಿರುವ ಮತ್ತಿಬ್ಬರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಶುಕ್ರವಾರ ಮುಂಜಾನೆ 2:30 ರ ಸುಮಾರಿಗೆ ತುಘಲಕಾಬಾದ್‌ನಲ್ಲಿರುವ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ನೆಲಮಹಡಿ ಸೇರಿದಂತೆ ಒಟ್ಟು ಐದು ಮಹಡಿಗಳಿರುವ ಈ ವಸತಿ ಸಂಕೀರ್ಣದ ಪಾರ್ಕಿಂಗ್‌ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಸದ್ಯದ ಮಾಹಿತಿಯ ಪ್ರಕಾರ ನೆಲಮಹಡಿಯಲ್ಲಿ ಎಲೆಕ್ಟ್ರಿಕ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದುಬಂದಿದೆ. ಅಲ್ಲಿ ಚಾರ್ಜ್ ಮಾಡಲಾಗುತ್ತಿದ್ದ ಎಲೆಕ್ಟ್ರಿಕ್ ಸ್ಕೂಟರ್ ಸೇರಿದಂತೆ ಪಾರ್ಕ್ ಮಾಡಲಾಗಿದ್ದ ಏಳು ದ್ವಿಚಕ್ರ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಬೆಂಕಿ ತೀವ್ರತೆ ಹೆಚ್ಚಾಗಿ ಕಟ್ಟಡಕ್ಕೆ ವ್ಯಾಪಿಸಿದೆ.

ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಕಟ್ಟಡದ ಮೆಟ್ಟಿಲುಗಳು ಸೇರಿದಂತೆ ಎಲ್ಲಾ ಕಡೆ ದಟ್ಟವಾದ ಹೊಗೆ ಹರಡಿಕೊಂಡಿದೆ. ಇದರಿಂದಾಗಿ ಕಟ್ಟಡದಲ್ಲಿದ್ದ ನಿವಾಸಿಗಳು ಹೊರಬರಲಾಗದೇ ಅಲ್ಲೇ ಸಿಲುಕಿಕೊಂಡಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ಸ್ಥಳೀಯ ಪೊಲೀಸರು, 4 ಅಗ್ನಿಶಾಮಕ ದಳದ ವಾಹನಗಳು ಹಾಗೂ ಅಂಬುಲೆನ್ಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಜಂಟಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ವೇಳೆ ಕಟ್ಟಡದಲ್ಲಿ ಸಿಲುಕಿಕೊಂಡಿದ್ದ 8 ಜನರನ್ನು ರಕ್ಷಿಸಿ ಕೂಡಲೇ ಸಫ್ದರ್ಜಂಗ್ ಆಸ್ಪತ್ರೆ ಮತ್ತು ಏಮ್ಸ್ ಟ್ರಾಮಾ ಸೆಂಟರ್‌ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ಘಟನೆಗೆ ನಿಖರ ಕಾರಣ ಏನು? ಯಾವ ಪ್ರಮಾಣದಲ್ಲಿ ಹಾನಿಯಾಗಿದೆ ಅನ್ನೋದನ್ನ ಪೊಲೀಸರು ಪರಿಶೀಲಿಸುತ್ತಿದ್ದಾರೆ.

- Advertisement -

Related news

error: Content is protected !!