Friday, August 28, 2026
spot_imgspot_img
spot_imgspot_img

ನೇಪಾಳ ಭೀಕರ ಪ್ರವಾಹ – 400ರ ಗಡಿಯತ್ತ ಸಾವಿನ ಸಂಖ್ಯೆ :1500ಕ್ಕೂ ಹೆಚ್ಚು ಜನ ನಾಪತ್ತೆ

- Advertisement -
- Advertisement -

ಕಠ್ಮಂಡು: ಮೂವತ್ತು ವರ್ಷಗಳಲ್ಲೇ ಅತ್ಯಂತ ಭೀಕರವಾದ ಪ್ರವಾಹಕ್ಕೆ ನೇಪಾಳ ತತ್ತರಿಸಿಹೋಗಿದೆ. ಈ ನೈಸರ್ಗಿಕ ವಿಕೋಪದಲ್ಲಿ ಸಾವಿನ ಸಂಖ್ಯೆ 392ಕ್ಕೆ ತಲುಪಿದ್ದು, 1500ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ.

ಬುಧವಾರ (ಆ.6) ಸಂಭವಿಸಿದ ಈ ಜಲಪ್ರಳಯದಿಂದಾಗಿ ದೇಶಾದ್ಯಂತ ವ್ಯಾಪಕ ನಷ್ಟ ಉಂಟಾಗಿದೆ. ಚಿತ್ರಾನ್, ನವಲ್‌ಪರಾಸಿ, ಧಾಡಿಂಗ್, ರಸುವಾ ಮತ್ತು ನುನಾಕೋಟ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಾವುನೋವುಗಳು ಸಂಭವಿಸಿವೆ. ಪ್ರವಾಸಕ್ಕೆ ತೆರಳಿದ್ದ 288 ಭಾರತೀಯರು ಸೇರಿದಂತೆ ನಾಪತ್ತೆಯಾಗಿರುವ ನೂರಾರು ಜನರಿಗಾಗಿ ರಕ್ಷಣಾ ಪಡೆಗಳು ತೀವ್ರ ಹುಡುಕಾಟ ನಡೆಸುತ್ತಿವೆ. ಈವರೆಗೆ ಸೈನಿಕರು ಹಾಗೂ ರಕ್ಷಣಾ ಸಿಬ್ಬಂದಿ 800ಕ್ಕೂ ಹೆಚ್ಚು ಜನರನ್ನು ಸುರಕ್ಷಿತವಾಗಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಭಾರೀ ಪ್ರವಾಹದ ರಭಸಕ್ಕೆ ಒಟ್ಟು 80ಕ್ಕೂ ಅಧಿಕ ಸೇತುವೆಗಳು (35 ಸಾಮಾನ್ಯ ಹಾಗೂ 45 ತೂಗುಸೇತುವೆಗಳು) ಕೊಚ್ಚಿಹೋಗಿವೆ. ಇದರೊಂದಿಗೆ ರಾಜಧಾನಿ ಕಠ್ಮಂಡುವನ್ನು ಸಂಪರ್ಕಿಸುವ ಮುಖ್ಯ ಹೆದ್ದಾರಿ ಸೇರಿದಂತೆ ನೂರಾರು ಕಿಲೋಮೀಟರ್ ರಸ್ತೆಗಳು ಜಲಸಮಾಧಿಯಾಗಿವೆ. ಪರಿಣಾಮವಾಗಿ ದೇಶದ ಪ್ರಮುಖ ಸಂಚಾರ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದ್ದು, ನೇಪಾಳದ ಆಧುನಿಕ ಇತಿಹಾಸದಲ್ಲೇ ಇದು ಅತ್ಯಂತ ದೊಡ್ಡ ದುರಂತವಾಗಿ ದಾಖಲಾಗಿದೆ.

ನೇಪಾಳದಲ್ಲಿ ಉಂಟಾಗಿರುವ ಭೀಕರ ಪ್ರವಾಹದ ಅಲೆ ಕನ್ನಡಿಗರಿಗೂ ತಟ್ಟಿದ್ದು, ಅಲ್ಲಿ ಸಿಲುಕಿರುವ ರಾಜ್ಯದ ಪ್ರವಾಸಿಗರನ್ನು ಸುರಕ್ಷಿತವಾಗಿ ವಾಪಸ್ ಕರೆತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಬೆಂಗಳೂರು ಮೂಲದ 8 ಮಂದಿ ನೇಪಾಳ ಪ್ರವಾಹದಲ್ಲಿ ಸಿಲುಕಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದ್ದು, ಅವರ ಸಂಪೂರ್ಣ ವಿವರಗಳು ಇನ್ನು ಲಭ್ಯವಾಗಬೇಕಿದೆ. ಈ ಹಿನ್ನೆಲೆ ಕನ್ನಡಿಗರ ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಲು ನೇಪಾಳದ ರಾಜಧಾನಿ ಕಠ್ಮಂಡುಗೆ ಹಿರಿಯ ಐಎಎಸ್/ಹಿರಿಯ ಅಧಿಕಾರಿಗಳನ್ನು ನೇರವಾಗಿ ಕಳುಹಿಸಲು ಸರ್ಕಾರ ನಿರ್ಧರಿಸಿದೆ.

- Advertisement -

Related news

error: Content is protected !!