


ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ: 39/2025 ಕ್ಕೆ ಸಂಬಂಧಿಸಿದಂತೆ ಸಾಕ್ಷಿಯ ಗುರುತು ರಕ್ಷಣೆಗಾಗಿ ಮನವಿ ಸಲ್ಲಿಸಲಾಗಿದ್ದ ಸಂದರ್ಭದಲ್ಲಿ, ಸಾಕ್ಷಿದಾರನ ಪರವಾದ ವಕೀಲರು ಮಾಧ್ಯಮಗಳಿಗೆ ಪತ್ರಿಕಾ ಪ್ರಕಟಣೆ ಹಾಗೂ ಇತರ ಸಂವಹನ ನಡೆಸುವಾಗ ಹಲವು ಮಾಹಿತಿಗಳನ್ನು ಹಂಚಿಕೊಂಡಿರುವ ಬಗ್ಗೆ ವಕೀಲರನ್ನು ವಿಚಾರಣೆ ನಡೆಸಲಾಗಿರುತ್ತದೆ. ಸಾಕ್ಷಿ ದೂರುದಾರರ ಕೋರಿಕೆಯ ಮೇರೆಗೆ ಮಾಹಿತಿಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ ಎಂಬುದಾಗಿ ವಕೀಲರು ಪ್ರತ್ಯುತ್ತರ ಕಳುಹಿಸಿರುತ್ತಾರೆ. ಆದರೆ ಪತ್ರಿಕಾ ಪ್ರಕಟಣೆ ಹಾಗೂ ಇತರ ಸಂವಹನಗಳ ಮೂಲಕ ನೀಡಿರುವ ಮಾಹಿತಿಗಳು ಸಾಕ್ಷಿ ಗುರುತಿನ ರಕ್ಷಣೆ ಸಾಧ್ಯವಾಗಿರುವುದಿಲ್ಲ. ಅರ್ಜಿಯ ಹೆಚ್ಚಿನ ವಿಚಾರಣೆಯು ಬಾಕಿಯಿರುತ್ತದೆ.
ಸಾಕ್ಷಿಯ ರಕ್ಷಣೆಗೆ ಸಂಬಂಧಿಸಿದಂತೆ, ನಿಯಮ 7 ರ ಅಡಿಯಲ್ಲಿ ಸಾಕ್ಷಿದಾರನ ಒಪ್ಪಿಗೆ ಮತ್ತು ಸಹಕಾರವಿದ್ದಲ್ಲಿ ಮಾತ್ರ ತೆಗೆದುಕೊಳ್ಳಬಹುದಾದ ಹಲವು ಕ್ರಮಗಳಿವೆ. ಈ ಬಗ್ಗೆ ದಿನಾಂಕ:10.07.2025 ರಂದು ಸಾಕ್ಷಿದಾರನ ಪರವಾದ ವಕೀಲರಿಗೆ ಇಮೇಲ್ ಮೂಲಕ ತಿಳಿಸಲಾಗಿದೆ. ಆದರೆ ಈವರೆಗೆ ಸಾಕ್ಷಿದಾರನ ಇರುವಿಕೆಯ ಬಗ್ಗೆ ಯಾವುದೇ ಮಾಹಿತಿಯನ್ನು ಪೊಲೀಸರೊಂದಿಗೆ ಹಂಚಿಕೊಂಡಿರುವುದಿಲ್ಲ. ಪ್ರಕರಣದ ಬಗ್ಗೆ ವಕೀಲರೊಂದಿಗೆ ಎಲ್ಲಾ ಸಂವಹನಗಳು ಇಮೇಲ್ ಮೂಲಕ ಮಾತ್ರ ನಡೆಯುತ್ತಿರುವುದಾಗಿದೆ.
ಸಾಕ್ಷಿದಾರನ ಇರುವಿಕೆಯ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಿಲ್ಲದಿದ್ದಾಗ, ಅಂತಹ ಸಾಕ್ಷಿದಾರನಿಗೆ ಸಾಕ್ಷಿ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂಬುದಾಗಿ ಪೊಲೀಸ್ ಉಪಾಧೀಕ್ಷಕರು ಸಕ್ಷಮ ಪ್ರಾಧಿಕಾರಕಕ್ಕೆ ವರದಿಯನ್ನು ಸಲ್ಲಿಸುತ್ತಾರೆ.








