Thursday, March 28, 2024
spot_imgspot_img
spot_imgspot_img

ದೇಸಿ ಕೊರೊನಾ ಲಸಿಕೆ ಕುರಿತು ವಿನಾಕಾರಣ ಟೀಕೆ ಬೇಡ: ಸಚಿವ ಡಾ.ಕೆ.ಸುಧಾಕರ್

- Advertisement -G L Acharya panikkar
- Advertisement -

ಬೆಂಗಳೂರು: ನಮ್ಮ ದೇಶದ್ದೇ ಆದ ಭಾರತ್ ಬಯೋಟೆಕ್ ಕಂಪನಿ ಕೊರೊನಾ ಲಸಿಕೆ ಅಭಿವೃದ್ಧಿಪಡಿಸಿದೆ. ಆದರೆ ಈ ಕುರಿತು ವಿನಾಕಾರಣ ಟೀಕೆ ಮಾಡುವ ಮೂಲಕ ವಿಜ್ಞಾನಿಗಳಿಗೆ ಅಗೌರವ ತೋರಬಾರದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದ್ದಾರೆ.

ಈ ಕುರಿತು ಸಚಿವರು ಸರಣಿ ಟ್ವೀಟ್ ಮಾಡಿದ್ದಾರೆ. ಕೋವಿಡ್ ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ಭಾರತದ ಕಂಪನಿ ಕೊವ್ಯಾಕ್ಸಿನ್ ಅಭಿವೃದ್ಧಿಪಡಿಸಿದೆ. ಭಾರತ್ ಬಯೋಟೆಕ್ ಬಹಳ ಹೆಸರುವಾಸಿ ಹಾಗೂ ನಂಬಿಕೆಗೆ ಅರ್ಹವಾದ ಕಂಪನಿಯಾಗಿದ್ದು, ಎಚ್ 1 ಎನ್ 1, ರೋಟಾವೈರಸ್, ರೇಬಿಸ್, ಚಿಕೂನ್ ಗುನ್ಯಾ, ಝೀಕಾ ಸೇರಿದಂತೆ 16 ರೋಗಗಳಿಗೆ ಲಸಿಕೆ ಆವಿಷ್ಕರಿಸಿದೆ. ಕೋವ್ಯಾಕ್ಸಿನ್ ನ 3 ನೇ ಹಂತದ ಕ್ಲಿನಿಕಲ್ ಟ್ರಯಲ್ ನಲ್ಲಿ 24,000 ಮಂದಿ ಭಾಗವಹಿಸಿದ್ದು, ಈ ಬಗ್ಗೆ ಶೀಘ್ರವೇ ದತ್ತಾಂಶ ಲಭ್ಯವಾಗಲಿದೆ ಎಂದು ಸಚಿವರು ಹೇಳಿದ್ದಾರೆ.

ಕೊರೊನಾ ಲಸಿಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕು, ನಂತರ ಮಾತ್ರ ಅದನ್ನು ಅಧಿಕೃತ ಎನ್ನಲಾಗುತ್ತದೆ. ಒಬ್ಬ ಆರೋಗ್ಯ ಸಚಿವನಾಗಲ್ಲದೆ, ಸ್ವತಃ ಒಬ್ಬ ವೈದ್ಯಕೀಯ ವೃತ್ತಿಪರನಾಗಿ ನಮ್ಮ ಮನವಿ ಏನೆಂದರೆ, ಯಾರೂ ಕೂಡ ಲಸಿಕೆಯ ಬಗ್ಗೆ ವಿನಾಕಾರಣ ಟೀಕಿಸಬಾರದು. ಈ ಮೂಲಕ ವಿಜ್ಞಾನಿಗಳ ಪರಿಶ್ರಮಕ್ಕೆ ಧಕ್ಕೆ ತರಬಾರದು ಎಂದು ಸಚಿವರು ಕೋರಿದ್ದಾರೆ.

ಕೊರೊನಾ ಲಸಿಕೆಗೆ ಭಾರತ ಕೈಗೊಂಡಿರುವ ವೈಜ್ಞಾನಿಕ ಸಂಶೋಧನೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಬಿಲ್ ಗೇಟ್ಸ್ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರ ಹೇಳಿಕೆ ಕುರಿತಂತೆ ಟ್ವೀಟ್ ಮಾಡಿರುವ ಸಚಿವರು ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಕೋವಿಡ್ ಲಸಿಕೆ ಸಂಶೋಧನೆಯಲ್ಲಿ ಭಾರತ ಮುಂಚೂಣಿಯಲ್ಲಿದ್ದು, ‘ಸರ್ವೇಜನ ಸುಖಿನೋಭವಂತು’, ‘ವಸುದೈವ ಕುಟುಂಬಕಮ್’ ಆದರ್ಶದಂತೆ ಇಡೀ ಮನುಕುಲಕ್ಕೆ ಲಸಿಕೆ ಒದಗಿಸುವಲ್ಲಿ ಭಾರತ ಮಹತ್ವದ ಪಾತ್ರ ವಹಿಸಲಿದೆ ಎಂದು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ಯು.ಕೆ.ಯಿಂದ ಬಂದಿರುವ 75 ಮಂದಿ ಹಾಗೂ ಸಂಪರ್ಕಿತರ ಪೈಕಿ 37 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಪೈಕಿ 11 ಮಂದಿಗೆ ಮಾತ್ರ ರೂಪಾಂತರಗೊಂಡ ಕೊರೊನಾ ಬಂದಿದೆ, ರೂಪಾಂತರಗೊಂಡ ಸೋಂಕು ಬಂದವರ ಸಂಖ್ಯೆ ಏರಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು, ಶಿಕ್ಷಕರಿಗೆ ಕೊರೊನಾ ಬಂದಿರುವ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ. ನಿಖರವಾಗಿ ಮಾಹಿತಿ ಪಡೆಯಲಾಗುವುದು. ಆದರೆ ಗಾಬರಿಯಾಗುವಂತಹ ವರದಿಯೇನೂ ಬಂದಿಲ್ಲ. ಇದನ್ನು ದೊಡ್ಡದು ಮಾಡಿ ಗಾಬರಿಪಡಿಸುವುದು ಬೇಡ ಎಂದು ಮನವಿ ಮಾಡಿದರು.

- Advertisement -

Related news

error: Content is protected !!