Thursday, March 28, 2024
spot_imgspot_img
spot_imgspot_img

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗುತ್ತಿಗೆ ನಡೆಸುತ್ತಿರುವವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ: ಆಯೋಗ ಸ್ಪಷ್ಟನೆ

- Advertisement -G L Acharya panikkar
- Advertisement -

ಬೆಂಗಳೂರು: ರಾಜ್ಯದಲ್ಲಿ ಎರಡು ಹಂತಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆಗೆ ಸಿದ್ಧತೆಗಳು ನಡೆಯುತ್ತಿದ್ದು, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಆಯೋಗ ಸ್ಪಷ್ಟವಾಗಿ ಹೇಳಿದೆ.

ಗುತ್ತಿಗೆದಾರರು ಪ್ರಸ್ತುತ ಗ್ರಾಮ ಪಂಚಾಯತ್ ಕಾಮಗಾರಿ ನಿರ್ವಹಿಸುತ್ತಿದ್ದಲ್ಲಿ ಅವರು ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಅನರ್ಹರಾಗುತ್ತಾರೆ. ಈ ವಿಷಯದಲ್ಲಿ ಚುನಾವಣಾಧಿಕಾರಿಗಳಿಗೆ ಮಾಹಿತಿ ಇಲ್ಲವಾದಲ್ಲಿ ಅವರು ಯಾವುದೇ ಕ್ರಮ ತೆಗೆದುಕೊಳ್ಳುವ ಅಗತ್ಯವಿಲ್ಲ. ಆದರೆ, ಒಂದು ವೇಳೆ ಅಭ್ಯರ್ಥಿಯೊಬ್ಬರು ಈ ಬಗ್ಗೆ ಮಾಹಿತಿಯನ್ನು ಸೂಕ್ತ ದೃಢೀಕರಣದೊಂದಿಗೆ ನೀಡಿದಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಗ್ರಾಮ ಪಂಚಾಯತ್ ಚುನಾವಣೆ ಕುರಿತು ಚುನಾವಣಾ ಆಯೋಗ ಕೆಲವು ಸ್ಪಷ್ಟೀಕರಣ ನೀಡಿದ್ದು, ಈ ಸಂಬಂಧ ಚುನಾವಣಾ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಗಂಡ ಸರ್ಕಾರಿ ನೌಕರನಾಗಿದ್ದರೆ ಹೆಂಡತಿ ಚುನಾವಣೆಗೆ ಸ್ಪರ್ಧಿಸಬಹುದು. ಅದೇ ರೀತಿ ಹೆಂಡತಿ ಸರ್ಕಾರಿ ನೌಕರಳಾಗಿದ್ದಲ್ಲಿ ಗಂಡ ಕೂಡ ಸ್ಪರ್ಧೆ ಮಾಡಬಹುದಾಗಿದೆ.

ನಾಮಪತ್ರ ವಾಪಸ್ಸು ಪಡೆಯಲು ಸೂಚಕರ ಬದಲಾಗಿ ಬೇರೊಬ್ಬರನ್ನು ಮತದಾರನ ಮುಖಾಂತರ ಕಳುಹಿಸಿದರೆ ಅದನ್ನು ಪರಿಗಣಿಸಬೇಕಿಲ್ಲ. ಅಭ್ಯರ್ಥಿ, ಸೂಚಕ ಅಥವಾ ಅವನ ಏಜೆಂಟನ ಮುಖಾಂತರ ಮಾತ್ರ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಬಹುದು ಎಂದು ಹೇಳಿದೆ.

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿ ಹಾಗೂ ಸೂಚಕ ಗ್ರಾಮ ಪಂಚಾಯತ್ ಮತದಾರನಾಗಿರಬೇಕು. ಮೀಸಲು ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳಿಂದ ಅಧಿಕೃತ ಮೂಲ ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬೇಕು. ಚುನಾವಣೆಗೆ ಸಾಮಾನ್ಯ ವರ್ಗಕ್ಕೆ 200 ರೂ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಹಾಗೂ ಮಹಿಳಾ ಮೀಸಲಾತಿಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ 100 ರೂ ಠೇವಣಿ ನಿಗದಿಡಿಸಲಾಗಿದೆ. ಒಬ್ಬ ಅಭ್ಯರ್ಥಿಗೆ ಸೂಚಕರಾಗಿರುವವರು ಸಹ ಅಭ್ಯರ್ಥಿಯಾಗಲು ಅವಕಾಶವಿದೆ.

ಸೂಚಕನು ಇಷ್ಟೇ ಅಭ್ಯರ್ಥಿಗಳಿಗೆ ಸೂಚಕರಾಗಿರಬೇಕೆಂಬ ನಿಯಮವಿಲ್ಲ. ಪರಿಶಿಷ್ಟ ಜಾತಿ ಪ್ರವರ್ಗಕ್ಕೆ ಮೀಸಲಾಗಿರುವ ಸ್ಥಾನಕ್ಕೆ ಯಾವುದೇ ನಾಮಪತ್ರ ಬಾರದೇ ಇದ್ದ ಪಕ್ಷದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯಿಂದ ನಾಮಪತ್ರ ಸ್ವೀಕರಿಸಬಹುದು. ಇದು ಹಿಂದುಳಿದ ವರ್ಗ ಎ ಮತ್ತು ಹಿಂದುಳಿದ ವರ್ಗ ಬಿ ಪ್ರವರ್ಗಕ್ಕೂ ಸಹ ಅನ್ವಯವಾಗುತ್ತದೆ. ಆದರೆ ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕದೊಳಗೆ ಮೀಸಲಿಟ್ಟಿರುವ. ಪ್ರವರ್ಗದ ವ್ಯಕ್ತಿಯಿಂದ ನಾಮಪತ್ರ ಸ್ವೀಕೃತವಾದರೆ, ಬೇರೆ ಪ್ರವರ್ಗದ ವ್ಯಕಿ ಸಲ್ಲಿಸಿರುವ ನಾಮಪತ್ರವನ್ನು ಠೇವಣಿ ಹಣದೊಂದಿಗೆ ಹಿಂತಿರುಗಿಸಬೇಕಾಗುತ್ತದೆ ಎಂದು ಸ್ಪಷ್ಟನೆ ನೀಡಿದೆ.

ಒಬ್ಬ ಅಭ್ಯರ್ಥಿ ಒಂದು ಕ್ಷೇತ್ರಕ್ಕೆ ಗರಿಷ್ಟ 4 ನಾಮಪತ್ರಗಳನ್ನು ಸಲ್ಲಿಸಬಹುದು. ಗ್ರಾಮ ಪಂಚಾಯತ್ ಸದಸ್ಯನಾಗಲು ಕನಿಷ್ಠ 21 ವರ್ಷ ವಯಸ್ಸಾಗಿರಬೇಕು ಎಂದು ಆಯೋಗ ಸ್ಪಷ್ಟನೆ ಕೊಟ್ಟಿದೆ.

- Advertisement -

Related news

error: Content is protected !!