


ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾಜಿ ಮಿತ್ರ ಎಲಾನ್ ಮಸ್ಕ್ ಶನಿವಾರ ‘ಅಮೆರಿಕ ಪಾರ್ಟಿ’ ಎಂಬ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ.
ಅಧ್ಯಕ್ಷ ಟ್ರಂಪ್ ‘ಒನ್ ಬಿಗ್, ಬ್ಯೂಟಿಫುಲ್ ಬಿಲ್’ಗೆ ಸಹಿ ಹಾಕಿದ ಬಳಿಕ, ಎಲಾನ್ ಮಸ್ಕ್ ‘ಅಮೆರಿಕ ಪಾರ್ಟಿ’ ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ. ಈ ಹಿಂದೆ 2024 ರ ಚುನಾವಣೆಯಲ್ಲಿ ಟ್ರಂಪ್‌ಗೆ ಬೆಂಬಲವಾಗಿ ಮಸ್ಕ್ ನಿಂತಿದ್ದರು. ಆದರೆ ಇತ್ತೀಚೆಗೆ ಟ್ರಂಪ್ ಹಾಗೂ ಎಲಾನ್ ಮಸ್ಕ್ ಸಂಬಂಧ ಹಳಸಿದ ಹಿನ್ನೆಲೆ ಇದೀಗ ಮಸ್ಕ್ ಹೊಸ ಪಕ್ಷ ಸ್ಥಾಪಿಸುವ ನಿರ್ಧಾರ ಮಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಎಲಾನ್ ಮಸ್ಕ್, “ನೀವು ನಿಮ್ಮ ಸ್ವಾತಂತ್ರ‍್ಯವನ್ನು ಮರಳಿ ಪಡೆಯಲು ಅಮೆರಿಕ ಪಕ್ಷವನ್ನು ರಚಿಸಲಾಗಿದೆ. ದೇಶವನ್ನು ಹಾಳುಮಾಡುವುದು ಮತ್ತು ಭ್ರಷ್ಟಾಚಾರದ ವಿಷಯಕ್ಕೆ ಬಂದಾಗ, ಡೆಮೋಕ್ರಾಟ್‌ಗಳು ಮತ್ತು ರಿಪಬ್ಲಿಕನ್ನರ ನಡುವೆ ಯಾವುದೇ ವ್ಯತ್ಯಾಸವಿಲ್ಲ. ವಾಸ್ತವವಾಗಿ ಅವರು ಒಂದೇ ಪಕ್ಷ. ನಾವು ಪ್ರಜಾಪ್ರಭುತ್ವದಲ್ಲಿ ವಾಸಿಸುತ್ತಿಲ್ಲ, ನಾವು ಏಕಪಕ್ಷ ವ್ಯವಸ್ಥೆಯಲ್ಲಿ ವಾಸಿಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
ತೆರಿಗೆ ಮತ್ತು ಖರ್ಚು ಮಸೂದೆ ಜಾರಿಗೊಂಡರೆ ಉದ್ಯಮಿ ಎಲಾನ್ ಮಸ್ಕ್ ಅವರು ಎಲೆಕ್ಟ್ರಿಕ್ ವಾಹನಗಳ ಸಬ್ಸಿಡಿಗಿಂತ ಹೆಚ್ಚಿನದನ್ನು ಕಳೆದುಕೊಳ್ಳುವರು ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಖರ್ಚು ಮತ್ತು ವೆಚ್ಚ ಮಸೂದೆ (ಡಿಒಜಿಇ) ವಿರೋಧಿಸಿ ರಿಪಬ್ಲಿಕನ್ ಸದಸ್ಯರ ವಿರುದ್ಧ ಮಸ್ಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಮೆರಿಕ ಸಂಸತ್ ಮುಂದೆ ಇರುವ ಮಸೂದೆ ಕುರಿತಂತೆ ಮಸ್ಕ್ ಟೀಕೆಗಳ ನಂತರ ಟ್ರಂಪ್ ಹಾಗೂ ಮಸ್ಕ್ ನಡುವೆ ಬಿರುಕು ಮೂಡಿತ್ತು.