ಜೈಪುರ: ನಕಲಿ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ ಸುಮಾರು 35 ವರ್ಷಗಳ ಬಳಿಕ 11 ಪೊಲೀಸರಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ. ಹಿಂಸಾತ್ಮಕ ಪ್ರಕರಣದಲ್ಲಿ ಪಾಲ್ಗೊಂಡಿದ್ದಾರೆ ಎಂಬ ಆರೋಪದ ಮೇರೆಗೆ ಶಾಸಕ ಹಾಗೂ ರಾಜವಂಶಸ್ಥ ಮನ್ ಸಿಂಗ್ ಹಾಗೂ ಅವರ ಇಬ್ಬರು ಸಹಚರರನ್ನು ಪೊಲೀಸರು 1985ರಲ್ಲಿ ಗುಂಡಿಕ್ಕಿ ಕೊಂದಿದ್ದರು. ಇದು ನಕಲಿ ಎನ್ ಕೌಂಟರ್ ಎಂದು ಮನ್ ಸಿಂಗ್ ಕುಟುಂಬಸ್ಥರು ಕೋರ್ಟ್ ಮೊರೆ ಹೋಗಿದ್ದರು.
ಈ ಬಗ್ಗೆ ಬರೋಬ್ಬರಿ 35 ವರ್ಷಗಳ ಬಳಿಕ ತೀರ್ಪು ನೀಡಿದ ಮಥುರಾದ ಸಿಬಿಐನ ವಿಶೇಷ ಕೋರ್ಟ್, ನಕಲಿ ಎನ್ ಕೌಂಟರ್ ಎಂದು ಸಾಬೀತಾದ ಹಿನ್ನಲೆಯಲ್ಲಿ ಉಪ ಪೊಲೀಸ್ ಆಯುಕ್ತ ಸೇರಿ ಒಟ್ಟು 11 ಮಂದಿ ಪೊಲೀಸರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಏನಿದು ಘಟನೆ..?
ರಾಜವಂಶಸ್ಥರಾಗಿದ್ದ ಮನ್ ಸಿಂಗ್ ರಾಜಸ್ಥಾನದಲ್ಲಿ ಸತತ 7 ಬಾರಿ ಸ್ವತಂತ್ರ ಶಾಸಕರಾಗಿದ್ದರು. 1985ರಲ್ಲಿ ಫೆಬ್ರವರಿಯಲ್ಲಿ ಮತ್ತೆ ಚುನಾವಣೆ ಕಾವು ಜೋರಾಗಿತ್ತು. ಈ ಹಿನ್ನಲೆಯಲ್ಲಿ ಮನ್ ಸಿಂಗ್ ಅಬ್ಬರದ ಪ್ರಚಾರ ನಡೆಸುತ್ತಿದ್ದರು. ಇವರ ವಿರುದ್ಧ ನಿವೃತ್ತ ಐಎಎಸ್ ಅಧಿಕಾರಿ ವಿಜೇಂದರ್ ಸಿಂಗ್ ಕಾಂಗ್ರೆಸ್ ನಿಂದ ಕಣಕ್ಕಿಳಿದ್ದರು. ಹೀಗಾಗಿ ವಿಜೇಂದರ್ ಪರ ಪ್ರಚಾರ ಮಾಡಲು ಆಗಿನ ಸಿಎಂ ಶಿವಚರಣ್ ಡೀಗ್ ಪ್ರದೇಶಕ್ಕೆ ಬಂದಿದ್ದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಮನ್ ಸಿಂಗ್ ಅವರ ಭಾವಚಿತ್ರವಿದ್ದ ಬ್ಯಾನರ್ ಗಳನ್ನು ಕಿತ್ತು ಹಾಕಿದರು. ಇದನ್ನು ತಿಳಿದ ಮನ್ ಸಿಂಗ್ ತನ್ನ ಕಾರ್ಯಕರ್ತರೊಂದಿಗೆ ಸ್ಥಳಕ್ಕೆ ಧಾವಿಸಿ ಕಾಂಗ್ರೆಸ್ ಬಾವುಟಗಳನ್ನು ಕಿತ್ತು ಹಾಕಿದರು. ಇದಲ್ಲದೇ, ಪ್ರಚಾರಕ್ಕೆ ಬಂದಿದ್ದ ಸಿಎಂ ಹೆಲಿಕಾಪ್ಟರ್ ಗೆ ಮನ್ ಸಿಂಗ್ ಗುದ್ದಿದ್ದರು. ನಂತರ ಗಲಾಟೆ ಹಿಂಸಾತ್ಮಕ ರೂಪ ಪಡೆದುಕೊಂಡ ಹಿನ್ನಲೆಯಲ್ಲಿ ಕರ್ಪ್ಯೂ ಜಾರಿ ಮಾಡಲಾಗಿತ್ತು. ನಂತರ ಜೀಪಿನಲ್ಲಿ ತೆರಳುತ್ತಿದ್ದ ಮನ್ ಸಿಂಗ್ ಅವರನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದರು.
ನಂತರ ರಾಜ ಮಾನ್ ಸಿಂಗ್ ಅವರ ಪುತ್ರಿ ಕೃಷ್ಣೇಂದ್ರ ಕೌರ್ ದೀಪಾ ಇದೊಂದು ಫೇಕ್ ಎನ್ ಕೌಂಟರ್ ಎಂದು ಆರೋಪಿಸಿದ್ದರು. ನಮ್ಮ ತಂದೆ ಪೊಲೀಸರೆದುರು ಶರಣಾಗಲೆಂದೇ ಠಾಣೆಗೆ ಹೋಗುತ್ತಿದ್ದರು. ಈ ವೇಳೆ ಪೊಲೀಸರು ನಕಲಿ ಎನ್ ಕೌಂಟರ್ ನಲ್ಲಿ ತಂದೆಯನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದರು. ನಂತರ ರಾಜಸ್ಥಾನದಲ್ಲಿ ವಿಚಾರಣೆ ನಡೆದರೆ ನ್ಯಾಯ ಸಿಗುವುದು ಕಷ್ಟ ಎಂದು ಮನ್ ಸಿಂಗ್ ಕುಟುಂಬಸ್ಥರು ಅಭಿಪ್ರಾಯಪಟ್ಟಿದ್ದರು. ನಂತರ ಪ್ರಕರಣವನ್ನು ಮಥುರಾ ಕೋರ್ಟ್ ಗೆ ವರ್ಗಾಯಿಸಲಾಗಿತ್ತು. ಇದೀಗ ಸುಮಾರು 35 ವರ್ಷಗಳ ಬಳಿಕ ಮನ್ ಸಿಂಗ್ ಕುಟುಂಬದ ಕಾನೂನು ಹೋರಾಟಕ್ಕೆ ಜಯಸಿಕ್ಕಂತಾಗಿದೆ. ಇನ್ನು ಈ 11 ಪೊಲೀಸರ ಪೈಕಿ ಈಗಾಗಲೇ 3 ಮಂದಿ ಸಹಜ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಈ ಬಗ್ಗೆ ಮಾಜಿ ರಾಜ್ಯಸಭಾ ಸಂಸದ ಹಾಗೂ ವಕೀಲ ಮಜೀದ್ ಮೆಮನ್ ಟ್ವೀಟ್ ಮಾಡಿದ್ದಾರೆ. ತಪ್ಪಿತಸ್ಥರನ್ನು ಗುರುತಿಸಲು ಇಷ್ಟು ವರ್ಷ ಕೋರ್ಟ್ ತೆಗೆದುಕೊಂಡಿರುವುದು ನನಗೆ ನಿಜಕ್ಕೂ ಆಘಾತವಾಗಿದೆ ಎಂದು ಹೇಳಿದ್ದಾರೆ.