Friday, June 19, 2026
spot_imgspot_img
spot_imgspot_img

ಗ್ರಾಹಕನಂತೆ ಬಂದು ಸಿನಿಮಾ ಶೈಲಿಯಲ್ಲಿ ಚಿನ್ನದ ಸರ ಕದ್ದು ಪರಾರಿ!

- Advertisement -
- Advertisement -

ಬಾಗಲಕೋಟೆ: ಜಿಲ್ಲೆಯ ವಿದ್ಯಾಗಿರಿಯಲ್ಲಿ ಹಗಲು ಹೊತ್ತಿನಲ್ಲೇ ಗ್ರಾಹಕನ ಸೋಗಿನಲ್ಲಿ ಬಂದ ಕಳ್ಳನೊಬ್ಬ ಆಭರಣ ಅಂಗಡಿಯಿಂದ ಚಿನ್ನದ ಸರವನ್ನು ಕದ್ದೊಯ್ದಿರುವ ಘಟನೆ ನಡೆದಿದೆ.

ಬಾಗಲಕೋಟೆ ವಿದ್ಯಾಗಿರಿ ಠಾಣಾ ವ್ಯಾಪ್ತಿಯ ಪ್ರಸಿದ್ಧ ಬೆಂಬಳಗಿ ಜ್ಯುವೆಲ್ಲರ್ಸ್ ಆಭರಣ ಮಳಿಗೆಯಲ್ಲಿ ಈ ಸಿನಿಮಾ ಮಾದರಿಯ ಕಳ್ಳತನ ನಡೆದಿದ್ದು, ಇಡೀ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಜೀನ್ಸ್ ಪ್ಯಾಂಟ್, ಲಾಂಗ್ ಶರ್ಟ್ ಹಾಗೂ ಶೂ ಧರಿಸಿ ಫುಲ್ ಅಪ್‌ಟುಡೇಟ್ ಆಗಿ ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬ, ಚಿನ್ನದ ಸರ ಖರೀದಿಸುವ ನೆಪದಲ್ಲಿ ಅಂಗಡಿಗೆ ಪ್ರವೇಶಿಸಿದ್ದಾನೆ. ಅಂಗಡಿಯ ಸಿಬ್ಬಂದಿ ಆತನಿಗೆ ವಿವಿಧ ವಿನ್ಯಾಸದ ಚಿನ್ನದ ಸರಗಳನ್ನು ತೋರಿಸುತ್ತಾ ವಿವರಣೆ ನೀಡುತ್ತಿದ್ದ ವೇಳೆ ಕಳ್ಳನ ಪಕ್ಕದಲ್ಲೇ ನಿಂತಿದ್ದ ದಂಪತಿಯೊಬ್ಬರು ತಮಗಾಗಿ ಬೇರೆ ಆಭರಣಗಳನ್ನು ನೋಡುವುದರಲ್ಲಿ ಮಗ್ನರಾಗಿದ್ದರು.

ಇದೇ ಪರಿಸ್ಥಿತಿಯ ಲಾಭ ಪಡೆದ ಕಳ್ಳ, ಸಿಬ್ಬಂದಿ ಕೈಲಿದ್ದ 25 ಗ್ರಾಂ ತೂಕದ ಚಿನ್ನದ ಸರವನ್ನು ತಾನು ನೋಡುವುದಾಗಿ ಹೇಳಿ ಕೈಯಲ್ಲಿ ಹಿಡಿದು ಪರಶೀಲಿಸುತ್ತಿದ್ದ. ಕೈಯಲ್ಲಿ ಹಿಡಿದು ಪರಿಶೀಲಿಸುವಂತೆ ನಟಿಸುತ್ತಿದ್ದ ಆತ, ಸಿಬ್ಬಂದಿ ಹಾಗೂ ಪಕ್ಕದಲ್ಲಿದ್ದ ದಂಪತಿಯ ಗಮನ ಬೇರೆಡೆ ಇದ್ದದ್ದನ್ನು ಕಂಡು, ಕ್ಷಣಾರ್ಧದಲ್ಲಿ ಸರದೊಂದಿಗೆ ಅಂಗಡಿಯಿಂದ ಹೊರಗೆ ಓಡಿ ನಾಪತ್ತೆಯಾಗಿದ್ದಾನೆ.

ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ವಿದ್ಯಾಗಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಕಳ್ಳನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!