


ಮಧ್ಯಪ್ರದೇಶ: ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿರುವುದನ್ನು ಖಂಡಿಸಿ ವ್ಯಕ್ತಿಯೊಬ್ಬರು ನಾಯಿ ವೇಷ ಧರಿಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಗೆ ಆಗಮಿಸುವ ಮೂಲಕ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದ ಘಟನೆ ಮಧ್ಯಪ್ರದೇಶದ ಖಾಂಡ್ವಾದಲ್ಲಿ ವರದಿಯಾಗಿದೆ.
ನಾಯಿ ವೇಷ ಧರಿಸಿದ ವ್ಯಕ್ತಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಗೆ ಆಗಮಿಸಿದ್ದಾರೆ. ಇದನ್ನು ನೋಡಲು ಅಧಿಕಾರಿಗಳು ಹಾಗೂ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಜಮಾಯಿಸಿದ್ದರು.
ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸುವುದು ಆಡಳಿತ ಇಲಾಖೆಯ ಜವಾಬ್ದಾರಿಯಾಗಿದೆ. ಈ ಸಮಸ್ಯೆಗೆ ಶಾಶ್ವತ ಹಾಗೂ ಸೂಕ್ಷ್ಮತೆಯಿಂದ ಕೂಡಿದ ಪರಿಹಾರ ಕಂಡುಕೊಳ್ಳುವುದು ಅಗತ್ಯವಾಗಿದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
‘ಕಳೆದ ನಾಲ್ಕು ವರ್ಷಗಳಲ್ಲಿ ಬೀದಿ ನಾಯಿಗಳ ಸಂತಾನಹರಣಕ್ಕಾಗಿ 40 ಲಕ್ಷ ರೂಪಾಯಿ ವೆಚ್ಚ ಮಾಡಿದ್ದರೂ 13,225 ನಾಯಿ ಕಡಿತ ಪ್ರಕರಣಗಳು ವರದಿಯಾಗಿವೆ. ಸಂತಾನಹರಣ ಕಾರ್ಯಕ್ರಮದಲ್ಲಿ ಅಕ್ರಮಗಳು ನಡೆದಿವೆ. ಈ ಯೋಜನೆಯಲ್ಲಿ ಪಾರದರ್ಶಕತೆ ಕಾಪಾಡಬೇಕು ಹಾಗೂ ಬೀದಿ ನಾಯಿಗಳ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು ಎಂದು ತಿಳಿದು ಬಂದಿದೆ.








