Saturday, May 4, 2024
spot_imgspot_img
spot_imgspot_img

ಅಜಾಗರೂಕ, ಪೈಪೋಟಿ ಚಾಲನೆಯಿಂದ ಸಾವು ಸಂಭವಿಸಿದಲ್ಲಿ ಬಸ್ ಚಾಲಕ ಮಾಲಕರ ವಿರುದ್ಧ ಎಫ್‌ಐಆರ್

- Advertisement -G L Acharya panikkar
- Advertisement -

ಮಂಗಳೂರು: ಖಾಸಗಿ ಬಸ್ಸುಗಳ ಅತೀ ವೇಗ ಮತ್ತು ಅಜಾಗರೂಕ ಚಾಲನೆಯಿಂದಾಗಿ ಅಪಘಾತ ಪ್ರಯಾಣಿಕರ ಜೊತೆ ಸಿಬ್ಬಂದಿ ಜಗಳ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್‌ ಕಮಿಷನರ್ ಬಸ್ ಮಾಲಕರ ಜೊತೆ ತುರ್ತು ಸಭೆ ನಡೆಸಿದ್ದು, ಅಜಾಗರೂಕ ಚಾಲನೆಯಿಂದಾಗಿ ಅಪಘಾತವುಂಟಾಗಿ ಸಾವು ಸಂಭವಿಸಿದಲ್ಲಿ ಚಾಲಕ ಮತ್ತು ಬಸ್‌ ಮಾಲಕರಿಬ್ಬರ ವಿರುದ್ಧವೂ ಎಫ್‌ಐಆರ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಬಸ್‌ ಮಾಲಕರ ಜೊತೆಗೆ ಪೊಲೀಸ್‌ ಕಮಿಷನರ್, ಆರ್ ಟಿ ಓ ಅಧಿಕಾರಿಗಳು ಸಭೆ ನಡೆಸಿದ್ದು ಕೆಲವೊಂದು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಸೂಚನೆ ನೀಡಿದ್ದಾರೆ. ಟ್ರಾಫಿಕ್ ಪೊಲೀಸ್ ಮತ್ತು ಬಸ್‌ ಮಾಲಕರ ಮಾತುಗಳನ್ನು ಆಲಿಸಿದ ಬಳಿಕ ಪ್ರತಿಕ್ರಿಯಿಸಿದ ಕಮಿಷನರ್ ಅನುಪಮ್ ಅಗರ್ವಾಲ್, ಬಸ್ ಗಳ ನಡುವಿನ ಪೈಪೋಟಿ ಹಾಗೂ ಇದರಿಂದ ಸಿಬ್ಬಂದಿ ಮೇಲಿನ ಒತ್ತಡದಿಂದಲೇ ಸಮಸ್ಯೆ ಆಗಿದೆ. ಬಸ್ ಮಾಲೀಕರು ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸಮಾಲೋಚನೆ ನಡೆಸಿ ಕ್ರಮಬದ್ಧ ವೇಳಾಪಟ್ಟಿ ರೂಪಿಸಬೇಕು. ತಿಂಗಳ ಒಳಗೆ ಹೊಸ ನಿಯಮ ಕಾರ್ಯರೂಪಕ್ಕೆ ಬರಬೇಕು. ಅಪಘಾತದಲ್ಲಿ ಪ್ರಾಣ ಹಾನಿ ಸಂಭವಿಸಿದಲ್ಲಿ ಚಾಲಕ ಮತ್ತು ಬಸ್ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಏಕಕಾಲದಲ್ಲಿ ಮೂರ್ನಾಲ್ಕು ಬಸ್ ಗಳು ಸಂಚಾರ ಮಾಡುತ್ತಿರುವುದರಿಂದ ಪೈಪೋಟಿ ಏರ್ಪಟ್ಟು ಅಪಘಾತಕ್ಕೆ ಕಾರಣವಾಗುತ್ತಿದೆ ಎಂದು ಸಂಚಾರಿ ಪೊಲೀಸರು ಸಭೆಯ ಗಮನಕ್ಕೆ ತಂದಿದ್ದಾರೆ. ಕದ್ರಿ ಸಂಚಾರ ಠಾಣೆಯ ಇನ್ಸ್ ಪೆಕ್ಟರ್ ಗೋಪಾಲಕೃಷ್ಣ ಭಟ್ ಮಾತನಾಡಿ, ಕೆಲವು ರೂಟಿನಲ್ಲಿ ಬಸ್ ಮಾಲಕರಿಗೆ ತಮ್ಮ ಬಸ್ಸಿನಲ್ಲಿ ಸಿಬ್ಬಂದಿ ಯಾರು ಇದ್ದಾರೆ ಎಂಬುದು ತಿಳಿದಿರುವುದಿಲ್ಲ. ಕಲೆಕ್ಷನ್ ಆಗಬೇಕೆಂಬ ಒತ್ತಡಕ್ಕೆ ಬಿದ್ದು ಬಸ್‌ ಓಡಿಸುತ್ತಾರೆ. ಇದರಿಂದ ಅಪಘಾತಕ್ಕೆ ಕಾರಣ ಆಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ಅಜೀಜ್ ಪರ್ತಿಪ್ಪಾಡಿ ಮಾತನಾಡಿ, ಅಪಘಾತ, ಪ್ರಾಣ ಹಾನಿ ಆಗದಂತೆ ಕ್ರಮವಹಿಸಲು ಸಿಬ್ಬಂದಿಗೆ ಕಾರ್ಯಾಗಾರ ನಡೆಸಿದ್ದೇವೆ. ಬಸ್ಸಿನ ಮೆಟ್ಟಿಲುಗಳಲ್ಲಿ ನಿರ್ವಾಹಕರು, ಪ್ರಯಾಣಿಕರು ಸಂಚರಿಸದಂತೆ ಸೂಚನೆ ನೀಡಿದ್ದೇವೆ ಎಂದರು. ಆದರೆ ಪರಿಣಾಮ ಆಗಿಲ್ಲ ಯಾಕೆ ಎಂದು ಕಮಿಷನ‌ರ್‌ ಪ್ರಶ್ನೆ ಮಾಡಿದರು. ಆರ್ ಟಿ ಓ ರವಿಶಂಕರ್ ಮಾತನಾಡಿ, ಸಿಟಿ ಬಸ್ ಗಳಿಗೆ ವೇಳಾಪಟ್ಟಿ ನಿಗದಿ ಪಡಿಸುವುದಕ್ಕೆ ಹೈಕೋರ್ಟ್ ವಿಧಿಸಿದ್ದ ತಡೆಯಾಜ್ಞೆ ತೆರವಾಗಿದೆ. ಹೊಸತಾಗಿ ವೇಳಾಪಟ್ಟಿ ನಿಗದಿಪಡಿಸಲು ಅಡ್ಡಿ ಇಲ್ಲ. ಆ ಕೆಲಸ ಶೀಘ್ರದಲ್ಲಿ ಮಾಡಿಕೊಡುತ್ತೇವೆ ಎಂದು ಹೇಳಿದರು.

ರಸ್ತೆ ಗುಂಡಿಗಳ ಬಗ್ಗೆಯೂ ಬಸ್‌ ಮಾಲಕರು ಕಮಿಷನರ್ ಗಮನಕ್ಕೆ ತಂದಿದ್ದಾರೆ. ಮಳೆಗಾಲದಲ್ಲಿ ಪೂರ್ತಿಯಾಗಿ ರಸ್ತೆ ಗುಂಡಿ ಬಿದ್ದಿದ್ದು, ಹೆದ್ದಾರಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ತಿಳಿಸಿದ್ದಾರೆ. ಹೆದ್ದಾರಿ ಗುಂಡಿ ಬಿದ್ದಲ್ಲಿ, ಅದನ್ನು ಸರಿಪಡಿಸದೇ ಇದ್ದಲ್ಲಿ ಇಂಜಿನಿಯರ್ ಗಳ ವಿರುದ್ಧವೂ ಕ್ರಮ ಕೈಗೊಳ್ಳುವುದಕ್ಕೆ ಕಾನೂನಿನಲ್ಲಿ ಅವಕಾಶ ಇದೆ. ರಸ್ತೆಯ ದೋಷದ ಕಾರಣಕ್ಕೆ ಅಪಘಾತ ಸಂಭವಿಸಿದಲ್ಲಿ ಎಫ್‌ಐಆರ್ ದಾಖಲಿಸುವಂತೆ ಪೊಲೀಸ್‌ ಅಧಿಕಾರಿಗಳಿಗೆ ಕಮಿಷನ‌ರ್‌ ಸೂಚನೆ ನೀಡಿದರು.

ನಿಲ್ದಾಣಗಳಲ್ಲಿ ಬಸ್‌ ಬೇ ಇರದಿರುವುದು, ಅದರಿಂದಾಗಿ ಜನರು ಎಲ್ಲೆಲ್ಲಿ ನಿಲ್ಲುವಂತಾಗಿರುವುದು, ಸಿಟಿ ಬಸ್ ನಿಲ್ದಾಣದಲ್ಲಿ ಬಸ್ ಬೇ ಇಲ್ಲದೆ ಪರದಾಡುವುದು ಇತ್ಯಾದಿ ವಿಚಾರಗಳೂ ಚರ್ಚೆಗೆ ಬಂದವು. ಈ ವೇಳೆ ಎರಡು ತಿಂಗಳ ಹಿಂದೆಯೇ ಬಸ್ ಬೇ ಇರದಿರುವ ಬಗ್ಗೆ, ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು, ಸ್ಪಂದನೆ ನೀಡದಿರುವ ಬಗ್ಗೆಯೂ ಡಿಸಿಪಿ ದಿನೇಶ್ ಕುಮಾರ್, ಕಮಿಷನರ್ ಗಮನಕ್ಕೆ ತಂದಿದ್ದಾರೆ. ಸಭೆಯಲ್ಲಿ ಡಿಸಿಪಿ ಸಿದ್ದಾರ್ಥ್ ಗೋಯಲ್, ಎಸಿಪಿಗಳಾದ ಮಹೇಶ್‌ ಕುಮಾರ್, ಗೀತಾ ಕುಲಕರ್ಣಿ, ಮನೋಜ್ ಕುಮಾರ್ ನಾಯ್ಕ ಮತ್ತಿತರ ಅಧಿಕಾರಿಗಳಿದ್ದರು.

- Advertisement -

Related news

error: Content is protected !!