ಮಂಗಳೂರು, ಮಾ.24: ನಗರದ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ನರ್ಸಿಂಗ್ ಕಾಲೇಜಿನ ಐದು ಮಂದಿ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದು ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಮಾ.23 ರಂದು ಚಿಲೆಂಬಿ ಮಲರಾಯ ದೈವಸ್ಥಾನದ ಸಮೀಪದ ಸ್ಕಿಂಗಫೀಲ್ಡ್ ಲೇಔಟ್ ಪ್ರದೇಶದಲ್ಲಿ ಯುವಕರು ಮಾದಕ ವಸ್ತುವಾದ ಗಾಂಜಾ ಸೇವನೆ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿದರು. ಈ ವೇಳೆ ಐದು ಮಂದಿ ಯುವಕರು ಗಾಂಜಾ ಸೇವಿಸುತ್ತಿರುವುದು ಪತ್ತೆಯಾಯಿತು.
ಬಂಧಿತರನ್ನು ವಿಚಾರಿಸಿದಾಗ ಅವರು ಮಂಗಳೂರಿನ ವಿವಿಧ ನರ್ಸಿಂಗ್ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಾಗಿದ್ದು, ಪ್ರತ್ಯೇಕವಾಗಿ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವುದು ತಿಳಿದುಬಂದಿದೆ. ವಶಕ್ಕೆ ಪಡೆದ ಬಳಿಕ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.
ಬಂಧಿತರನ್ನು ಕೇರಳ ರಾಜ್ಯ ಮೂಲದ ಅಜಿಲ್ ನಾಜಿ (21), ಅಬು ಥಾಮಸ್ (23), ಮೆಲ್ಮನ್ ಟಿಲಿಸ್ (19) ಸೇರಿದಂತೆ ಇತರ ಇಬ್ಬರು ವಿದ್ಯಾರ್ಥಿಗಳೆಂದು ಗುರುತಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಉರ್ವಾ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.
ಇದೇ ವೇಳೆ ಸಂಬಂಧಪಟ್ಟ ಕಾಲೇಜು ಆಡಳಿತ ಮಂಡಳಿಗೆ ಮಾಹಿತಿ ನೀಡಲಾಗಿದ್ದು, ವಿದ್ಯಾರ್ಥಿಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಜೊತೆಗೆ ಬಾಡಿಗೆ ಮನೆ ನೀಡುವ ಮನೆ ಮಾಲೀಕರು ಯುವಕರ ಚಟುವಟಿಕೆಗಳ ಮೇಲೆ ನಿಗಾ ವಹಿಸಬೇಕು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.








