



ಮಡಿಕೇರಿ: ಮಡಿಕೇರಿ ಸಮೀಪದ ಕಾಟಕೇರಿ ಗ್ರಾಮದಲ್ಲಿರುವ ಹರ್ ಮಂದಿರ್ ವಸತಿಯುತ ಆಶ್ರಮ ಶಾಲೆಯಲ್ಲಿ ಇಂದು ಮುಂಜಾನೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಏಳು ವರ್ಷದ ಬಾಲಕನೋರ್ವ ಸಜೀವ ದಹನಗೊಂಡ ಘಟನೆ ಇಂದು ಮುಂಜಾನೆ ನಡೆದಿದೆ.
ಭಾಗಮಂಡಲ ಸಮೀಪದ ಚೆಟ್ಟಿಮಾನಿ ನಿವಾಸಿ ಅನಿಲ್ ಕುಮಾರ್ ಎಂಬವರ ಪುತ್ರ ಪುಷ್ಪಕ್ ಕೆ.ಎ.(7) ಮೃತಪಟ್ಟ ಬಾಲಕ. ಈತ ಆಶ್ರಮ ಶಾಲೆಯ 2ನೇ ತರಗತಿ ವಿದ್ಯಾರ್ಥಿಯಾಗಿದ್ದ. ಇಂದು ನಸುಕಿನ ವೇಳೆ ನಾಲ್ಕು ಗಂಟೆ ಈ ಅಗ್ನಿ ದುರಂತ ಸಂಭವಿಸಿದೆ. ದಟ್ಟ ಹೊಗೆ ಮತ್ತು ಬೆಂಕಿಯ ಕೆನ್ನಾಲಿಗೆ ಆವರಿಸುತ್ತಿದ್ದಂತೆ ಶಾಲೆಯಲ್ಲಿದ್ದ ಇತರ 52ರಷ್ಟು ವಿದ್ಯಾರ್ಥಿಗಳು ಹೊರಗೆ ಓಡಿ ಅಪಾಯದಿಂದ ಪಾರಾಗಿದ್ದಾರೆ. ಆದರೆ, ನಿದ್ದೆಯಲ್ಲಿದ್ದ ಪುಷ್ಪಕ್ ಕೋಣೆಯೊಳಗೆ ಸಿಲುಕಿಕೊಂಡಿದ್ದು, ಹೊರಬರಲಾಗದೆ ಕೊನೆಯುಸಿರೆಳೆದಿರುವುದಾಗಿ ತಿಳಿದುಬಂದಿದೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಆದರೆ ಅಷ್ಟರಲ್ಲಿ ಆಶ್ರಮ ಭಾಗಶಃ ಧ್ವಂಸಗೊಂಡಿದೆ. ಮಡಿಕೇರಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.








