ಯಾದಗಿರಿ: ನಗರದ ಪ್ರಮುಖ ಮನರಂಜನಾ ತಾಣವಾದ ಲುಂಬಿನಿ ಗಾರ್ಡನ್ನಲ್ಲಿ “ದೆವ್ವ ಇದೆ” ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಜನರಲ್ಲಿರುವ ಮೂಢನಂಬಿಕೆ ಮತ್ತು ಭಯವನ್ನು ಹೋಗಲಾಡಿಸಲು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು (ಕೆಎಸ್ವಿಎಸ್ಪಿ) ಸತ್ಯಶೋಧನೆ ಹಾಗೂ ಜಾಗೃತಿ ಅಭಿಯಾನ ನಡೆಸಲು ಮುಂದಾಗಿದೆ.

ಏನಿದು ಘಟನೆ?
ಕಳೆದ ಕೆಲ ದಿನಗಳಿಂದ ಲುಂಬಿನಿ ಗಾರ್ಡನ್ನಲ್ಲಿ ವಿಚಿತ್ರ ಶಬ್ದಗಳು ಕೇಳಿಸುತ್ತಿವೆ ಎಂಬ ಹೇಳಿಕೆಗಳು ಕೇಳಿಬಂದಿವೆ. ಜೊತೆಗೆ, ಉದ್ಯಾನದಲ್ಲಿ “ಅಲೌಕಿಕ ಘಟನೆ” ನಡೆದಿದೆ ಎಂದು ಹೇಳಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಿಂದಾಗಿ ಸ್ಥಳೀಯ ನಿವಾಸಿಗಳು, ವಿಶೇಷವಾಗಿ ಮಕ್ಕಳು ಮತ್ತು ಮಹಿಳೆಯರು ಉದ್ಯಾನಕ್ಕೆ ಬರಲು ಭಯಪಡುತ್ತಿದ್ದಾರೆ.
ಈ ವದಂತಿಯ ಸತ್ಯಾಸತ್ಯತೆ ಪರಿಶೀಲಿಸಲು ಕೆಎಸ್ವಿಎಸ್ಪಿ ಮುಂದಾಗಿದೆ. ಈ ಸಂಬಂಧ ನಾಳೆ (ಭಾನುವಾರ) ಮಧ್ಯಾಹ್ನ 12 ಗಂಟೆಗೆ ಲುಂಬಿನಿ ಗಾರ್ಡನ್ ಆವರಣದಲ್ಲಿ “ಲುಂಬಿನಿ ಗಾರ್ಡನ್ನಲ್ಲಿ ದೆವ್ವ ಇದೆಯೇ? – ಒಂದು ವೈಜ್ಞಾನಿಕ ಜಾಗೃತಿ ಅಭಿಯಾನ” ಕಾರ್ಯಕ್ರಮ ಆಯೋಜಿಸಲಾಗಿದೆ.
“ನಗರದ ಪ್ರಜ್ಞಾವಂತ ನಾಗರಿಕರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಅಭಿಯಾನದಲ್ಲಿ ಭಾಗವಹಿಸಬೇಕು. ಆಧಾರರಹಿತ ವಿಡಿಯೋಗಳಿಗೆ ಮರುಳಾಗದೆ ವೈಜ್ಞಾನಿಕ ದೃಷ್ಟಿಕೋನದಿಂದ ಸತ್ಯವನ್ನು ಅರಿತು ಭಯಮುಕ್ತರಾಗಬೇಕು,” ಎಂದು ಪರಿಷತ್ತು ಪ್ರಕಟಣೆಯಲ್ಲಿ ಮನವಿ ಮಾಡಿದೆ.








