Wednesday, April 24, 2024
spot_imgspot_img
spot_imgspot_img

ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮ- ಅಧಿಕಾರಿಗಳೊಂದಿಗೆ ಸಾರ್ವಜನಿಕರ ಸಂವಾದ

- Advertisement -G L Acharya panikkar
- Advertisement -

ಕಡಬ: ಗ್ರಾಮಸ್ಥರು ಹಾಗೂ ಅಧಿಕಾರಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಹಲವರು ತಮ್ಮೂರಿನ ಸಮಸ್ಯೆಗಳನ್ನು ಮಂಡಿಸಿದರು. ಒಟ್ಟು 64 ಅರ್ಜಿಗಳನ್ನು ಗ್ರಾಮಸ್ಥರು ಪತ್ರಕರ್ತರ ಸಂಘದ ಮೂಲಕ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ.

ಸಿರಿಬಾಗಿಲು ಗ್ರಾಮದ ದಾಮೋದರ ಗೌಡ ಮಾತನಾಡಿ, ಕೊಂಬಾರು ಗ್ರಾಮವು ಹಳ್ಳಿಗಳಿಂದ ಕೂಡಿದ್ದು ಅರಣ್ಯದ ಮಧ್ಯದಿಂದ ಹಾದುಹೋಗಿದೆ. ಪ್ರತಿಯೊಂದು ಹಳ್ಳಿಗಳು ಮೂರರಿಂದ ನಾಲ್ಕು ಕಿಲೋ ಮೀಟರ್ ದೂರದಲ್ಲಿದೆ. ಎಲ್ಲಾ ಮೂಲಭೂತ ಸೌಕರ್ಯ ದಿಂದ ವಂಚಿತವಾಗಿರುವ ಸಿರಿಬಾಗಿಲು ಗ್ರಾಮದಿಂದ ಕೊಂಬಾರು ಪಂಚಾಯತ್ ಕಛೇರಿಯನ್ನು 20 ಕಿಲೋಮೀಟರ್ ದೂರ ಸುತ್ತು ಬಳಸಿ ಬರಬೇಕಿದೆ.

ಮಳೆಗಾಲದಲ್ಲಿ ದ್ವೀಪದಂತಾಗುವ ಸಿರಿಬಾಗಿಲು ಗ್ರಾಮದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ. ಅಲ್ಲದೆ ಅರಣ್ಯ ಇಲಾಖೆಯ ವಿರೋಧದಿಂದಾಗಿ ವಾಸ ಭೂಮಿಯನ್ನು ಕೂಡಾ ಅಕ್ರಮ ಸಕ್ರಮ ಮೂಲಕ ದಾಖಲಾತಿ ಮಾಡಲು ಅವಕಾಶ ದೊರೆಯುತ್ತಿಲ್ಲ, ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೆ ಮಾಡುವ ಮೂಲಕ ಭೂ ಸಮಸ್ಯೆಯನ್ನು ನೀಗಿಸಬೇಕು ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಅರಣ್ಯ ಇಲಾಖೆಯ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಅರಣ್ಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಚರ್ಚಿಸಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಕ್ರಮ‌ ಕೈಗೊಳ್ಳಲಾಗುವುದು ಎಂದರು. ಇನ್ನುಳಿದ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ತಂಡದೊಂದಿಗೆ ಪರಿಶೀಲಿಸಲು ಸಹಾಯಕ ಆಯುಕ್ತರಿಗೆ ಸೂಚನೆ‌ ನೀಡಿದರು.

ಕೊಂಬಾರು ಗ್ರಾಮ ಪಂಚಾಯತ್ ಸದಸ್ಯ ಮಧುಸೂದನ್ ಕೊಂಬಾರು ಮಾತನಾಡಿ, ರಸ್ತೆಯ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಕಳೆದ ಆರು ವರ್ಷಗಳಿಂದ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ವಿದ್ಯುತ್ ಸಮಸ್ಯೆ ಬಿಗಡಾಯಿಸಿದ್ದು, ತಂತಿಗಳು ಜೋತು ಬಿದ್ದಿವೆ‌ ಎಂದು ದೂರಿದರು. ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಶಶಿಧರ್ ಬೊಟ್ಟಡ್ಕ ಮಾತನಾಡಿ, ಕೊಂಬಾರು ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರದ ಅವಶ್ಯಕತೆ ಇದ್ದು, ಅದನ್ನು ಪೂರೈಸುವಂತೆ ಮತ್ತು ಕಾಲೇಜು ಮಕ್ಕಳಿಗೆ ಅನುಕೂಲವಾಗುವಂತೆ ಗುಂಡ್ಯ – ಸುಬ್ರಹ್ಮಣ್ಯ ರಸ್ತೆಯಲ್ಲಿ ಹೆಚ್ಚುವರಿ ಕೆ.ಎಸ್.ಆರ್.ಟಿ.ಸಿ ಬಸ್ ಸೌಲಭ್ಯಗಳನ್ನು ಕಲ್ಪಿಸಬೇಕು. ಅಲ್ಲದೆ ಖಾಲಿ ಇರುವ ಡಿಸಿ ಮನ್ನಾ ಭೂಮಿಯನ್ನು ನಿವೇಶನ ರಹಿತರಿಗೆ ಹಂಚುವಂತೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಖಾಲಿ ಇರುವ ಡಿಸಿ ಮನ್ನಾ ಭೂಮಿಯನ್ನು ತಕ್ಷಣದಿಂದಲೇ ಗ್ರಾಮ ಪಂಚಾಯತ್ ಗೆ ವಹಿಸಿ ಮನೆ ಇಲ್ಲದವರಿಗೆ ನೀಡಲು ತಾಲೂಕು ಆಡಳಿತಕ್ಕೆ ಸೂಚನೆ ನೀಡಿದರು‌. ಪ್ರಾಥಮಿಕ ಆರೋಗ್ಯ ಕೇಂದ್ರದ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದರು‌. ಹೊನ್ನಪ್ಪ ಸಿರಿಬಾಗಿಲು ಮಾತನಾಡಿ, ಸಿರಿಬಾಗಿಲು ಶಾಲೆಗೆ ಕೊಂಬಾರು ಗ್ರಾಮದಲ್ಲಿ ಆಟದ ಮೈದಾನವಿದ್ದು, ಅದಕ್ಕೆ ಯಾವುದೇ ದಾಖಲೆ ಪತ್ರಗಳಿಲ್ಲದ ಕಾರಣ ಸರಕಾರದಿಂದ ಅನುದಾನ ಬರುವುದಿಲ್ಲ‌ ಎಂದರು.

ಈ ಬಗ್ಗೆ ಕಡಬ ತಾಲೂಕು ಕಂದಾಯ ನಿರೀಕ್ಷಕರು ಮುಂದಿನ ಒಂದು ವಾರದೊಳಗೆ ಸಮಸ್ಯೆಯನ್ನು ಪರಿಹರಿಸಿ ವರದಿ ಸಲ್ಲಿಸಬೇಕೆಂದು ಸೂಚಿಸಿದರು.ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತಿಯಾದವರಿಗೆ ಸರಿಯಾದ ಮನೆ ಇಲ್ಲ. ಸರಕಾರದ ಯಾವುದೇ ಸವಲತ್ತುಗಳನ್ನು ಪಡೆಯಲು ಎಲ್ಲಾ ಕಡೆಗಳಲ್ಲಿ ಜಾತಿ ಸಮಸ್ಯೆ ಅಡ್ಡಿಯಾಗುತ್ತಿದೆ ಎಂದು ಸೆಲ್ವಕುಮಾರ್ ಹೇಳಿದರು. ಜಿಲ್ಲಾಧಿಕಾರಿಯವರು ಸಮಸ್ಯೆಯನ್ನು ಪರಿಹರಿಸುವ ಭರವಸೆ ನೀಡಿದರು.

ಚಿದಾನಂದ ದೇವುಪಾಲ್ ಮಾತನಾಡಿ, ಕೃಷಿಗೆ ಕಾಡು ಪ್ರಾಣಿಗಳ ಹಾವಳಿ ಮಿತಿಮೀರಿದೆ ಎಂದರು. ಜಯರಾಜ್ ಮಾತನಾಡಿ ನೆಟ್‌ವರ್ಕ್ ಸಮಸ್ಯೆ ಮಿತಿಮೀರಿದ್ದು, ತುರ್ತು ಸಂದರ್ಭಗಳಲ್ಲಿ ನೆಟ್‌ವರ್ಕ್ ಗಾಗಿ ಪಕ್ಕದ ಊರಿಗೆ ತೆರಳಬೇಕಾದ ಅನಿವಾರ್ಯತೆ ಇದೆ. ಇಂದು ಅಧಿಕಾರಿಗಳು ಬಂದಿದ್ದರಿಂದ ನೆಟ್‌ವರ್ಕ್ ಕೂಡಾ ಬಂದಿದೆ. ಅಧಿಕಾರಿಗಳು ಹಿಂತಿರುಗುವಾಗ ನೆಟ್‌ವರ್ಕ್ ಕೂಡಾ ಹೋಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು. ಇದಕ್ಕುತ್ತರಿಸಿದ ಜಿಲ್ಲಾಧಿಕಾರಿ, ತಾಲೂಕು ಅಧಿಕಾರಿಗಳ ಮೂಲಕ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು‌.

ತಾ.ಪಂ.ಸದಸ್ಯೆ ಆಶಾ ಲಕ್ಷ್ಮಣ್ ಮಾತನಾಡಿ, ಸರಕಾರದಿಂದ ವಿಶೇಷ ಅನುದಾನ ಬಂದಲ್ಲಿ ಮಾತ್ರ ಗ್ರಾಮದ ಸಮಸ್ಯೆಗಳನ್ನು ನಿವಾರಿಸಬಹುದು. ಹಳ್ಳಿ ಅಭಿವೃದ್ಧಿ ಆಗಿಲ್ಲ ಎನ್ನುವುದಕ್ಕೆ ಉದಾಹರಣೆಯೆಂದರೆ ವಾರದ ಮೊದಲು ತಾ.ಪಂ.ನಿಂದ ಮೀಟಿಂಗ್ ಪತ್ರವನ್ನು ಪೋಸ್ಟ್ ಮಾಡಿದರೂ ಮೀಟಿಂಗ್ ಕಳೆದು ಎರಡು ದಿನಗಳ ನಂತರ ಕೈ ಸೇರುತ್ತಿದೆ ಎಂದರು. ಕೋವಿಡ್ ಕಾರಣದಿಂದ ಬಸ್ಸಿನ ತೊಡಕಿದ್ದರೂ ವಿಶೇಷ ವಾಹನ ಸೌಲಭ್ಯ ಕಲ್ಪಿಸಿ ಪೋಸ್ಟ್ ಗಳನ್ನು ತಲುಪಿಸಲಾಗುತ್ತಿದೆ, ತಡವಾಗುವುದರ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಅಂಚೆ ಇಲಾಖೆಯ ಅಧಿಕಾರಿಗಳು ತಿಳಿಸಿದರು.

- Advertisement -

Related news

error: Content is protected !!