


ಬೆಂಗಳೂರು : ಪಾದಚಾರಿ ಮಾರ್ಗದಲ್ಲಿ ಮೋಟಾರು ವಾಹನ ಚಲಾಯಿಸುವವರಿಗೆ ದಂಡದ ಮೊತ್ತವನ್ನು 5000 ರೂ.ಗೆ ಹೆಚ್ಚಿಸುವಂತೆ ಒತ್ತಾಯಿಸಿ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು ಸಾರಿಗೆ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಬುಧವಾರ ಬೆಂಗಳೂರು ನಗರ ಸಂಚಾರ ವಿಭಾಗದ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ಸಾರ್ವಜನಿಕರ ನಡೆಯುವ ಹಕ್ಕನ್ನು ಖಚಿತಪಡಿಸುವ ಸಲುವಾಗಿ ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ನಗರದಲ್ಲಿ ಪಾದಾಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದರು.
ಐದೂ ಪಾಲಿಕೆಯ ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಕೆಲಸಕ್ಕೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ, ಹೀಗೆ ಬೀದಿಬದಿ ವ್ಯಾಪಾರಿಗಳಿಂದ ತೆರವಾದ ಜಾಗದಲ್ಲಿ ಯಾವುದೇ ರೀತಿಯ ಮೋಟಾರು ವಾಹನಗಳನ್ನು ಚಲಾಯಿಸುವುದು ಸರಿಯಲ್ಲ. ಇಂತಹ ಕೃತ್ಯಗಳನ್ನು ಸಹಿಸಿಕೊಳ್ಳುವುದೂ ಸಾಧ್ಯವಿಲ್ಲ ಎಂದು ಕೃಷ್ಣಬೈರೇಗೌಡ ಬೇಸರ ಹೊರಹಾಕಿದರು.
ವಾಹನ ಸವಾರರು ಯಾವುದೇ ಭಯ ಇಲ್ಲದೆ ಒತ್ತುವರಿ ತೆರವಾಗಿರುವ ಪಾದಾಚಾರಿ ಮಾರ್ಗದಲ್ಲಿ ಚಲಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಹಲವರು ಈಗಾಗಲೇ ನನಗೆ ದೂರು ನೀಡಿದ್ದಾರೆ. ಪಾದಾಚಾರಿ ಮಾರ್ಗದಲ್ಲಿ ವಾಹನ ಚಲಾಯಿಸುವಾಗ ಅಪಘಾತಗಳಾದರೆ ಯಾರು ಹೊಣೆ? ಹೀಗಾಗಿ ಟ್ರಾಫಿಕ್ ಪೊಲೀಸರು ಇಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಜರುಗಿಸಬೇಕು ಎಂದು ಕೃಷ್ಣಬೈರೇಗೌಡ ಒತ್ತಾಯಿಸಿದ್ದಾರೆ.
ಅಲ್ಲದೆ, ದಂಡದ ಮೊತ್ತ ಅಧಿಕವಾದರೆ ಮಾತ್ರ ಇಂತಹ ಅಪರಾಧಗಳನ್ನು ತಡೆಯಲು ಸಾಧ್ಯ ಹೀಗಾಗಿ ಪಾದಾಚಾರಿ ಮಾರ್ಗದಲ್ಲಿ ವಾಹನ ಚಲಾಯಿಸಿದರೆ ಪ್ರಸ್ತುತ ಚಾಲ್ತಿಯಲ್ಲಿರುವ 500 ರೂ. ದಂಡವನ್ನು 5000 ರೂ.ಗೆ ಏರಿಸುವಂತೆ ಸಾರಿಗೆ ಸಚಿವರಿಗೆ ಪತ್ರ ಬರೆದಿದ್ದೇನೆ ಎಂದು ಕೃಷ್ಣಬೈರೇಗೌಡ ತಿಳಿಸಿದರು. ಮುಖ್ಯ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಲೇಬಾರದು ಎಂಬುದು ನನ್ನ ಅಭಿಪ್ರಾಯ. ಈ ನಿಯಮವನ್ನು ಜಾರಿಗೊಳಿಸುವುದು ವಾಸ್ತವದಲ್ಲಿ ಕಷ್ಟಸಾಧ್ಯ ಆದರೆ, ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮಗಳನ್ನಾದರೂ ಪಾಲಿಸಿ ಎಂದು ಕೃಷ್ಣಬೈರೇಗೌಡ ಅಧಿಕಾರಿಗಳನ್ನು ಒತ್ತಾಯಿಸಿದರು ಎಂದು ತಿಳಿದು ಬಂದಿದೆ.








