✍️ ಶ್ರೀಮತಿ ಸರ್ವಮಂಗಳ.ಕೆ ವಿಟ್ಲ



ಇಂದು ಗುರುಪೂರ್ಣಿಮೆ. ಮೊದಲ ಬಾರಿಗೆ ಮಹರ್ಷಿ ವೇದವ್ಯಾಸರು ಎಲ್ಲಾ ನಾಲ್ಕು ವೇದಗಳ ಜ್ಞಾನವನ್ನು ಮನುಕುಲಕ್ಕೆ ನೀಡಿದ ದಿನವೇ ಗುರುಪೂರ್ಣಿಮಾ ದಿನ. ಹಾಗಾಗಿ ಇದನ್ನು ವ್ಯಾಸ ಪೂರ್ಣಿಮೆ ಎಂದು ಕರೆಯುತ್ತಾರೆ. ಇದು ಆಷಾಢ ಮಾಸದ ಹುಣ್ಣಿಮೆಯಂದು ಆಚರಿಸಲಾಗುವುದು. ಅಲ್ಲದೆ ವೇದವ್ಯಾಸರ ಜನ್ಮದಿನವೂ ಇಂದೇ ಆಗಿದೆ. ವಿಶ್ವದ ಶ್ರೇಷ್ಠ ಗುರು ವೇದವ್ಯಾಸರು ಮೊದಲನೇ ಗುರು ಎಂಬ ಖ್ಯಾತಿ ಪಡೆದಿದ್ದಾರೆ.
“ಗುರು” ಎನ್ನುವ ಶಬ್ದವೇ ಅದ್ಭುತ ಅರ್ಥವನ್ನು ಹೊಂದಿದೆ. ಸಂಸ್ಕೃತ ಭಾಷೆಯಲ್ಲಿ “ಗು “ಎಂದರೆ ಅಂಧಕಾರ.” ರು “ಎಂದರೆ ಕಳೆಯುವ ಅಥವಾ ದೂರ ಮಾಡುವ ಎಂದರ್ಥ. ಆದ್ದರಿಂದ ಗುರು ಎಂದರೆ ಅಂಧಕಾರ ಕಳೆದು ಜ್ಞಾನದ ಜ್ಯೋತಿಯನ್ನು ಬೆಳಗಿಸುವಾತ. ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಪ್ರಥಮ ಸ್ಥಾನವಿದೆ.
ಗುರುಕರುಣೆ ಒಂದಿರಲು ಕೊರತೆ ಒರತೆಯಾದೀತು, ಅಭಾವವೂ ಭಾವವಾದೀತು, ಅಲಭ್ಯವು ಲಭ್ಯವಾದೀತು, ಜಡವು ಚೇತನವಾದೀತು, ಕೊರಡು ಕೊನರೀತು. ಹಾಗಾಗಿ ಗುರುವು ತೂಗಲಾರದ ತೂಕ… ಶಿಷ್ಯ ಹತ್ತಿಗಿಂತ ಹಗುರ..
ಗುರುಪೂರ್ಣಿಮೆಗೆ ಧಾರ್ಮಿಕ ಪ್ರಾಮುಖ್ಯತೆ ಅಲ್ಲದೆ ಶೈಕ್ಷಣಿಕ ಪ್ರಾಮುಖ್ಯತೆ ಇದೆ . ಈ ದಿನ ವಿದ್ಯಾರ್ಥಿಗಳು ಶಿಕ್ಷಕರನ್ನು ಸ್ಮರಿಸುವ ವಂದಿಸುವ ದಿನವಾಗಿದೆ. ಗುರುವಂದರೆ ಕೇವಲ ಶಿಕ್ಷಕರಲ್ಲ , ಜೀವನದಲ್ಲಿ ಸರಿದಾರಿಯನ್ನು ತೋರಿಸುವ ಪ್ರತಿಯೊಬ್ಬರು ಗುರುಗಳೇ, ಅವರು ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದೊಯ್ಯುವ ಶಕ್ತಿಯಾಗಿರುತ್ತಾರೆ. ಗುರುಪೂರ್ಣಿಮೆಯು ಗುರು- ಶಿಷ್ಯ ಪರಂಪರೆಯ ಅದ್ಭುತ ಪ್ರತೀಕವಾಗಿ, ನಮ್ಮ ಸಂಸ್ಕೃತಿಯನ್ನು ಮೆರೆಸುವ ಆಚರಣೆಯಾಗಿದೆ. ಎಲ್ಲಾ ಗುರುವೃಂದಕ್ಕೂ ಅನಂತಾನಂತ ಶರಣು…
✍️ ಶ್ರೀಮತಿ ಸರ್ವಮಂಗಳ.ಕೆ ವಿಟ್ಲ