ಮಂಗಳೂರು: ಹರೇಕಳ ಗ್ರಾಮದಲ್ಲಿ ಐದು ಮಂದಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸ್ವಯಂ ನಿಯಂತ್ರಣಕ್ಕೆ ಪಂಚಾಯತ್ ಮತ್ತು ಗ್ರಾಮಸ್ಥರು ಮುಂದಾಗಿದ್ದು ಈ ಬಗ್ಗೆ ಪಂಚಾಯತ್‍ನಲ್ಲಿ ಸರ್ವ ಧರ್ಮದ ಜಂಟಿ ಸಭೆ ನಡೆದಿದೆ. ಕೊರೊನಾ ನಿಯಂತ್ರಿಸಲು ಕಠಿಣ ಕ್ರಮ ಅಗತ್ಯವಾಗಿರುವುದರಿಂದ ಹತ್ತು ದಿನ ಗ್ರಾಮದಲ್ಲಿ ಸಂಪೂರ್ಣ ಲಾಕ್‍ಡೌನ್ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ. ಪೂರ್ವಭಾವಿಯಾಗಿ ವಾಹನ ಪ್ರಚಾರಕ್ಕೆ ಚಾಲನೆ ನೀಡಲಾಗಿದೆ.
3ನೇ ತಾರೀಖಿನಂದು ಪಂಚಾಯತ್‍ನಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದ್ದು, ಸೋಮವಾರದಿಂದ ಲಾಕ್‍ಡೌನ್ ಜಾರಿಗೆ ಬರಲಿದೆ. ಈ ಬಗ್ಗೆ ಮುಖಂಡ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಮಾಹಿತಿ ನೀಡಿ, ಗ್ರಾಮದಲ್ಲಿ ಕೊರೊನಾ ಸೋಂಕಿತರು ಹೆಚ್ಚಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಸ್ಥಳೀಯ ಮಸೀದಿ, ಮಂದಿರದ ಮುಖಂಡರು, ಸಂಘಟನೆಗಳು, ಸರ್ವಪಕ್ಷದ ಮುಖಂಡರ ಸಭೆಯನ್ನು ನಡೆಸಲಾಗಿದ್ದು, ಹತ್ತು ದಿನ ಲಾಕ್‍ಡೌನ್ ಸರಿಯಾದ ಮಾರ್ಗ ಎನ್ನುವ ತೀರ್ಮಾನಕ್ಕೆ ಬರಲಾಗಿದೆ. ಈ ಹಿನ್ನೆಲೆಯಲ್ಲಿ ಜುಲೈ 6ರಿಂದ 15ರವರೆಗೆ ಗ್ರಾಮದಲ್ಲಿ ಸಂಪೂರ್ಣ ಲಾಕ್‍ಡೌನ್ ಇರಲಿದೆ. ಈ ಸಂದರ್ಭ ಹರೇಕಳ-ಅಡ್ಯಾರ್ ಸಂಪರ್ಕಿಸುವ ದೋಣಿಗಳ ಸಹಿತ ಬಸ್ಸುಗಳ ಸಂಚಾರವೂ ಬಂದ್ ಆಗಲಾಗಿದೆ. ಹೊರಗಿನ ಖಾಸಗಿ ವಾಹನಗಳಿಗೆ ಪ್ರವೇಶಕ್ಕೆ ನಿಷೇಧ ಹೇರಲಾಗಿದ್ದು ಅತ್ಯಗತ್ಯ ಕೆಲಸ, ಕಾರ್ಯಗಳಿಗೆ ಹೊರಗೆ ಹೋಗುವವರು ಸೂಕ್ತ ತಪಾಸಣೆ ನಡೆಸಿ, ಕೆಲಸಕ್ಕೆ ಹೋಗುವ ಬಗ್ಗೆ ಕಾರಣ ನೀಡಬೇಕು ಎಂದು ತಿಳಿಸಿದ್ದಾರೆ.
ತಾಲೂಕು ಪಂಚಾಯತ್ ಮಾಜಿ ಸದಸ್ಯ ಮುಸ್ತಫಾ ಮಲಾರ್ ಮಾತನಾಡಿ, ಲಾಕ್‍ಡೌನ್ ಸಂದರ್ಭ ಗ್ರಾಮದಲ್ಲಿ ಕಾರ್ಯಾಚರಿಸಲು 40 ಜನ ವಾರಿಯರ್ಸ್‌ಗಳ ತಂಡ ರಚನೆ ಮಾಡಲಾಗಿದೆ. ಅವರು ಗ್ರಾಮದ ಗಡಿಭಾಗದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಈ ಸಂದರ್ಭ ಕಾರ್ಯಕ್ಕೆ ಗ್ರಾಮಸ್ಥರ ಸಹಕಾರ ಇದ್ದಾಗ ಕೊರೊನಾ ನಿಯಂತ್ರಿಸಲು ಸಾಧ್ಯವಾಗಲಿದೆ ಎಂದು ಮನವಿ ಮಾಡಿದ್ದಾರೆ.
ಲಾಕ್‍ಡೌನ್ ಪ್ರಯುಕ್ತ ಮುಂದಿನ ಹತ್ತು ದಿನಗಳಲ್ಲಿ ಗ್ರಾಮದಲ್ಲಿರುವ ಎಲ್ಲಾ ಅಂಗಡಿಗಳು 12 ಗಂಟೆಗೆ ಬಂದ್ ಮಾಡಿದರೆ, ಹೊಟೇಲುಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುತ್ತಿದೆ. ವಯಸ್ಕರು, ಮಕ್ಕಳು ಮನೆಯಿಂದ ಹೊರಬರಬಾರದು. ಇಂದಿನಿಂದ ಎಲ್ಲಾ ಮನೆಗಳಿಗೆ ಸ್ಯಾನಿಟೈಸರ್ ಸಿಂಪಡಿಕೆ ಕಾರ್ಯ ನಡೆಯಲಿದೆ ಎಂದು ಪಂಚಾಯತ್ ಅಧ್ಯಕ್ಷೆ ಅನಿತಾ ಡಿಸೋಜ ತಿಳಿಸಿದರು.
ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು, ಉಪಾಧ್ಯಕ್ಷ ಮಹಾಬಲ ಹೆಗ್ಡೆ ದೆಬ್ಬೇಲಿಗುತ್ತು, ಸದಸ್ಯರಾದ ಬದ್ರುದ್ದೀನ್ ಫರೀದ್ ನಗರ, ಮೋಹನ್‍ದಾಸ್ ಶೆಟ್ಟಿ ಉಳಿದೊಟ್ಟು, ಬಶೀರ್ ಉಂಬುದ, ಎಂ.ಪಿ.ಮಜೀದ್, ಮುಖಂಡರಾದ ಬಶೀರ್, ವಾಮನ್‍ರಾಜ್ ಪಾವೂರು, ಇಮ್ತಿಯಾಝ್, ವಿವಿಧ ಪಕ್ಷ ಹಾಗೂ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.