ವಿಟ್ಲ: ಅಳಕೆಮಜಲು ಪ್ರವೀಣ್ ಶೆಟ್ಟಿಯವರ ನಿರ್ಮಾಣದ ಕೋಟಿ ವೆಚ್ಚದ ಅಂಡರ್ ವಲ್ಡ್ ಕಥೆಯ “ಹವಾಲ” ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ.”ಆ್ಯಪಲ್ಸ್ ಆ್ಯಂಡ್ ಪಿಯರ್ಸ್ ಫಿಲ್ಮಿ ಮಿಸ್ಟಿಕ್ಸ್” ಬ್ಯಾನರ್ ನಡಿ ಶ್ರೀ ಶಶಿಕುಮಾರ್ ಪಂಡಿತ್ ಅರ್ಪಿಸುವ ಕರಾವಳಿಯ ಉದ್ಯಮಿ ಅಳಕೆಮಜಲು ಪ್ರವೀಣ್ ಕುಮಾರ್ ಶೆಟ್ಟಿ ಪುತ್ತೂರು ನಿರ್ಮಾಣದ ಬಹುನಿರೀಕ್ಷಿತ “ಹವಾಲ” ಸಿನಿಮಾದ ಕನ್ನಡ ಮತ್ತು ತಮಿಳು ಎರಡೂ ಭಾಷೆಗಳ ಟ್ರೈಲರ್ ಗಳು ಈಗಾಗಲೇ ಬಿಡುಗಡೆಗೊಂಡಿದ್ದು ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಯೋಗರಾಜ್ ಭಟ್ ಟ್ರೈಲರ್ ಬಿಡುಗಡೆಗೊಳಿಸಿ ಸಿನಿಮಾದ ಯಶಸ್ಸಿಗೆ ಶುಭ ಹಾರೈಸಿದರು.ಟ್ರೆಂಡ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಸಿನಿಪ್ರಿಯರಿಗೆ ಟ್ರೈಲರ್ ಲಭ್ಯವಿದೆ.
ಶಶಿ ಕುಮಾರ್ ಪಂಡಿತ್ ಅರ್ಪಿಸುವ ಈ ಚಿತ್ರವನ್ನುಅಳಕೆಮಜಲು ಪ್ರವೀಣ್ ಶೆಟ್ಟಿಯವರು ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿದ್ದಾರೆ. ಚಿತ್ರ ಭೂಗತ ಲೋಕದ ಅತ್ಯದ್ಭುತವಾದ ರೋಚಕ ಕಥೆಯನ್ನೊಳಗೊಂಡಿದೆ.
hawala film-Official Trailer ಅಳಕೆಮಜಲು ಪ್ರವೀಣ್ ಶೆಟ್ಟಿ ನಿರ್ಮಾಣದ "ಹವಾಲ" ಚಿತ್ರದ ಟ್ರೇಲರ್ ಬಿಡುಗಡೆ
Posted by VTV on Wednesday, 22 July 2020
ಕೊರೋನಾ ಲಾಕ್‌ಡೌನ್ ಸಿನಿಮಾ ರಂಗಕ್ಕೂ ಬಲವಾದ ಪೆಟ್ಟು ನೀಡಿದೆ. ಆದರೆ ಹವಾಲ ಚಿತ್ರತಂಡದ ಹುಮ್ಮಸ್ಸು ಮಾತ್ರ ಕಡಿಮೆಯಾಗಿಲ್ಲ.ಆಪಲ್ಸ್ ಆಂಡ್ ಪಿಯರ್ಸ್ ಫಿಲ್ಮಿ ಮೈಸ್ಟಿಕ್ಸ್ ಬ್ಯಾನರ್ ನಡಿ ನಿರ್ಮಾಣವಾಗಿರುವ ಅಗ್ನಿಸಾಕ್ಷಿ ಖ್ಯಾತಿಯ ಅಮಿತ್ ರಾವ್ ಅವರ ಚೊಚ್ಚಲ ನಿರ್ದೇಶನದ ಸಿನಿಮಾ ಇದಾಗಿದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು ಉದಯೋನ್ಮುಖ ಸಂಗೀತ ನಿರ್ದೇಶಕರಾದ ಕಿಶೋರ್ ಎಕ್ಸಾ ಎರಡು ಭಾಷೆಗಳಲ್ಲೂ ಸಾಹಿತ್ಯ ಬರೆದು ರಾಗ ಸಂಯೋಜಿಸಿದ್ದಾರೆ.
ಮೊತ್ತಮೊದಲ ಬಾರಿಗೆ ತಮಿಳು ಸಿನಿಮಾದಲ್ಲಿ ತುಳುನಾಡಿಗೆ ಸಂಬಂಧ ಪಟ್ಟ ದೃಶ್ಯಗಳನ್ನು ಸಂಯೋಜಿಸಿದ್ದು, ತುಳು ಭಾಷೆಯ ಸೊಗಡು ಮತ್ತು ಹುಲಿ ವೇಷ ಕುಣಿತ ಸಿನಿಮಾದ ಹೈಲೈಟ್ ಆಗಿದೆ. ಶ್ರೀನಿವಾಸ್ ಮತ್ತು ಅಮಿತ್ ರಾವ್ ನಾಯಕ ನಟರಾಗಿ ಹಾಗೂ ಕಮಲಿ ಧಾರಾವಾಹಿ ಖ್ಯಾತಿಯ ಅಮೂಲ್ಯ ಗೌಡ ಮತ್ತು ಕಿರುತೆರೆ ನಟಿ ಸಹನಾ ಪೂಜಾರಿ ನಾಯಕಿ ನಟಿಯರಾಗಿ ಅಭಿನಯಿಸಿದ್ದಾರೆ. ನಿರ್ದೇಶನ ವಿಭಾಗದಲ್ಲಿ ಚೆನ್ನೈ ಮೂಲದ ಎಸ್.ಪಿ. ಸೆಲ್ವಂ ಜೊತೆ ಸ್ಥಳೀಯರಾದ ರಾಜ್ ಕೃಷ್ಣ ಉಡುಪಿ ಸಹನಿರ್ದೇಶಕರಾಗಿ ಹಾಗೂ ಸಂತೋಷ್ ಕೊಲ್ಯ ಮತ್ತು ಹೆನ್ಲಿ ವಿಶಾಲ್ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ದೇಯಿಬೈದೆತಿ ಚಲನಚಿತ್ರದ ನಿರ್ದೇಶಕರಾದ ಸೂರ್ಯೋದಯ ಪೆರಂಪಳ್ಳಿ ಭೂಗತ ಲೋಕದ ಡಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಶ್ರೀನಾಥ್ ವಸಿಷ್ಠ, ಕಾಮಿಲ್ ಷೇಕ್ ಮುಂಬೈ, ಕರಾವಳಿಗರಾದ ಪ್ರವೀಣ್ ಶೆಟ್ಟಿ, ಸಂತೋಷ್ ಕೊಲ್ಯ, ಅರುಣ್ ಶೆಟ್ಟಿ ಜೆ ಪ್ಪು, ಕಿಶೋರ್ ಕುಂಪಲ ಪ್ರಧಾನ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.