ಕಾರ್ಮಿಕರೇ ಮ್ಯಾನ್ ಹೋಲ್ ಇಳಿಯಲು ಹಿಂದೆ ಮುಂದೆ ನೋಡಬೇಕಿದ್ದರೆ ಇಲ್ಲೊಬ್ಬರು ಕಾರ್ಪೊರೇಟರ್ ಮ್ಯಾನ್ ಹೋಲ್ ಇಳಿದು ದುರಸ್ತಿ ಮಾಡಿದ್ದು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಸೂಟು ಬೂಟು ಹಾಕಿ ಪೋಸು ನೀಡುವ ಕಾರ್ಪೊರೇಟರ್ ಗಳ ಮಧ್ಯೆ ಹೀಗೆ ವಿಭಿನ್ನವಾಗಿ ಕಾಣಿಸಿಕೊಂಡವರು ಮಂಗಳೂರಿನ ಕದ್ರಿ ಕಂಬಳ ವಾರ್ಡ್ ನ ಬಿಜೆಪಿ ಕಾರ್ಪೋರೇಟರ್ ಮನೋಹರ ಶೆಟ್ಟಿ.
ಕದ್ರಿ ಕಂಬಳ ರಸ್ತೆಯಲ್ಲಿನ ಚರಂಡಿಯಲ್ಲಿ ಮಳೆ ನೀರಿನ ಹರಿವಿನ ಸಮಸ್ಯೆಯಾಗಿ ತಡೆಯುಂಟಾಗಿತ್ತು. ಸಮಸ್ಯೆ ಏನೆಂಬುದು ತಿಳಿಯಲು ಪಕ್ಕದಲ್ಲಿ ಮ್ಯಾನ್ ಹೋಲ್ ಚೇಂಬರ್ ಇದ್ದರೂ ಕಾರ್ಮಿಕರು ಅದರೊಳಗೆ ಇಳಿದು ಸಮಸ್ಯೆ ಬಗೆಹರಿಸಲು ಒಪ್ಪಲಿಲ್ಲ. ಈ ವೇಳೆ, ಅಲ್ಲಿದ್ದ ಕಾರ್ಪೊರೇಟರ್ ಮನೋಹರ್ ಶೆಟ್ಟಿ ಚೇಂಬರ್ ಒಳಗಡೆ ಇಳಿದು ಸಮಸ್ಯೆ ಏನೆಂದು ತಿಳಿದು ಕಾರ್ಮಿಕರಿಗೆ ವಿವರಿಸಿದ್ದಾರೆ.
ಇಷ್ಟಾದ ಮೇಲೂ ತೊಡಕನ್ನು ಸರಿಪಡಿಸಲು ಕಾರ್ಮಿಕರು ಚೇಂಬರ್ ಒಳಗಡೆ ಇಳಿಯದಿದ್ದಾಗ ಕೂಡಲೇ ಕಾರ್ಪೊರೇಟರ್ ಮನೆಯಿಂದ ಒಂದು ಜೊತೆ ಬದಲಿ ಬಟ್ಟೆಯನ್ನು ತರಿಸಿಕೊಂಡು ಚೇಂಬರ್ ಒಳಗಡೆ ಇಳಿದು ತಾನೇ ಸ್ವತಃ ಕೆಲಸ ಮಾಡಿ ಚರಂಡಿ ಸರಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜನಪರ ಜನಪ್ರತಿನಿಧಿ ಯಾವ ರೀತಿ ಇರಬೇಕು, ಇರಬಹುದು ಎಂಬುದಕ್ಕೆ ಕಾರ್ಪೊರೇಟರ್ ಮನೋಹರ ಶೆಟ್ಟಿ ಅದ್ಭುತ ನಿದರ್ಶನವಾಗಿ ತೋರಿದ್ದಾರೆ.