ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದ ಹಿನ್ನೆಲೆ ಮತ್ತೊಂದು ಪ್ರಕರಣ ದಾಖಲು



ಬೆಳ್ಳಾರೆ: ಮನೆಗಳ್ಳತನ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಘಟನೆ ಬೆಳಕಿಗೆ ಬಂದಿದೆ.
2022 ಮಾರ್ಚ್ 24ರಂದು ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆಗಳ್ಳತನ ಪ್ರಕರಣದಲ್ಲಿ (ಅ ಕ್ರ ಸಂಖ್ಯೆ: 22/2022 ಕಲಂ 457, 380 ಐಪಿಸಿ) ಆರೋಪಿಯಾಗಿ, ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಬೆಳ್ತಂಗಡಿ ನೆರಿಯ ನಿವಾಸಿ ಶರತ್ ಎಸ್(24) ಎಂಬಾತನನ್ನು ಬೆಳ್ಳಾರೆ ಠಾಣೆಯ ಪಿ.ಎಸ್.ಐ ಹಾಗೂ ಸಿಬ್ಬಂದಿಗಳು ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯದ ನ್ಯಾಯಾಧೀಶರಾದ ಶಿವಣ್ಣ ಹೆಚ್.ಆರ್ ಅವರು ಆರೋಪಿಗೆ ಐಪಿಸಿ ಕಲಂ 457ರಡಿ 6 ತಿಂಗಳ ಸಾಧಾರಣ ಶಿಕ್ಷೆ ಹಾಗೂ ₹500 ದಂಡ, ಐಪಿಸಿ ಕಲಂ 380ರಡಿ 10 ತಿಂಗಳ ಸಾಧಾರಣ ಶಿಕ್ಷೆ ಮತ್ತು ₹500 ದಂಡ ವಿಧಿಸಿದ್ದು, ದಂಡ ಪಾವತಿಸದಿದ್ದರೆ ಹೆಚ್ಚುವರಿಯಾಗಿ 10 ದಿನಗಳ ಶಿಕ್ಷೆ ವಿಧಿಸುವಂತೆ ಆದೇಶಿಸಿರುತ್ತಾರೆ.
ಪ್ರಕರಣದ ತನಿಖಾಧಿಕಾರಿಯಾಗಿ ಸಂತೋಷ್ ಬಿ.ಪಿ, ಪಿ.ಎಸ್.ಐ ಅವರು ಸಾಕ್ಷಿಗಳನ್ನು ಕಲೆಹಾಕಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದು, ಸಹಾಯಕ ಸರ್ಕಾರಿ ಅಭಿಯೋಜಕರಾಗಿ ಪ್ರೀತಿ ಎಂ.ಸಿ ಅವರು ಸಮರ್ಥ ವಾದ ಮಂಡಿಸಿದರು.
ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಲಂ 269ರಡಿ ಮತ್ತೊಂದು ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದಲ್ಲಿ ಮಾನ್ಯ ನ್ಯಾಯಾದೀಶರು ₹1000 ದಂಡ ಅಥವಾ 10 ದಿನಗಳ ಕಾರಾಗೃಹ ಶಿಕ್ಷೆ ವಿಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.








