ಹೈದರಾಬಾದ್: ತಿರುಮಲದ ಲಡ್ಡು ಪ್ರಸಾದ ತಯಾರಿಕೆಯಲ್ಲಿ ಕಲಬೆರಕೆ ತುಪ್ಪ ಬಳಕೆಯ ಆರೋಪದ ಹಿಂದೆ ಆಡಳಿತಾತ್ಮಕ ವೈಫಲ್ಯ ಮತ್ತು ನಿಯಮಾವಳಿಗಳ ಉಲ್ಲಂಘನೆಯ ಆಳವಾದ ಜಾಲವಿದೆ ಎಂದು ರಾಜ್ಯ ಸರ್ಕಾರ ನೇಮಿಸಿದ್ದ ಏಕಸದಸ್ಯ ಸಮಿತಿ ಸ್ಪಷ್ಟಪಡಿಸಿದೆ ಎಂದು ಸಿಬಿಐ ನೇತೃತ್ವದ ವಿಶೇಷ ತನಿಖಾ ತಂಡ ಪತ್ತೆಹಚ್ಚಿದ ಅಂಶಗಳನ್ನು ಪರಾಮರ್ಶಿಸಿದ ಬಳಿಕ ಸಮಿತಿ ಈ ನಿರ್ಣಯಕ್ಕೆ ಬಂದಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.



ಈ ಹಗರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಹಾಗೂ ಖರೀದಿ ವ್ಯವಸ್ಥೆಯಲ್ಲಿನ ಪರೀಕ್ಷಾ ಲೋಪಗಳೇನು ಎಂಬುದನ್ನು ಪತ್ತೆಹಚ್ಚಲು ಮಾಜಿ ಮುಖ್ಯ ಕಾರ್ಯದರ್ಶಿ ದಿನೇಶ್ ಕುಮಾರ್ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿ ಕೆಲ ದಿನಗಳ ಹಿಂದೆ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.ಪೂರೈಕೆ ಸರಪಣಿಯಲ್ಲಿಯೇ ಕಲಬೆರಕೆ ತುಪ್ಪ ಪ್ರವೇಶಿಸಲು ಅವಕಾಶ ಕಲ್ಪಿಸಿರುವಲ್ಲಿ ಹಿರಿಯ ಅಧಿಕಾರಿಗಳು ಹಾಗೂ ಖರೀದಿ ವ್ಯವಸ್ಥೆಯೇ ಉತ್ತರದಾಯಿಗಳಾಗಿದ್ದಾರೆ ಎಂದು ವರದಿ ಸೂಚಿಸಿದೆ.
ಪ್ರಸಾದ ತಯಾರಿಕೆಗೆ ಕಲಬೆರಕೆ ತುಪ್ಪ ಸೇರುವ ಪರಿಸ್ಥಿತಿ ನಿರ್ಮಾಣವಾಗಲು ಆಡಳಿತಾತ್ಮಕ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಉಲ್ಲೇಖಿಸಲಾಗಿದೆ.ಪ್ರಮುಖ ಲೋಪಗಳಿಗೆ ಮಾಜಿ ಕಾರ್ಯನಿರ್ವಹಣಾಧಿಕಾರಿ ಎ.ವಿ. ಧರ್ಮರೆಡ್ಡಿ ಮುಖ್ಯ ಹೊಣೆಗಾರರಾಗಿದ್ದಾರೆ. ಟೆಂಡರ್ ಪದ್ಧತಿಗಳ ದುರ್ಬಲಗೊಳಿಸುವಿಕೆ, ದೃಢಪಟ್ಟ ಕಲಬೆರಕೆಯ ವಿರುದ್ಧ ಕ್ರಮ ಕೈಗೊಳ್ಳದಿರುವುದು ಹಾಗೂ ಗುಣಮಟ್ಟದ ಬಗ್ಗೆ ಸಂಶಯ ಇರುವ ಸರಬರಾಜುದಾರರಿಂದ ನಿರಂತರ ವ್ಯವಹಾರ ನಡೆಸಿರುವುದು ಪ್ರಮುಖ ತಪ್ಪುಗಳಾಗಿ ಗುರುತಿಸಲಾಗಿದೆ.ಸೂಕ್ತ ಕಾರಣವಿಲ್ಲದೆ ಟೆಂಡರ್ ನಿಯಮಗಳನ್ನು ಸಡಿಲಿಸಲು ಅನುಮತಿ ನೀಡಿದ ಮತ್ತೊಬ್ಬ ಮಾಜಿ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಸಿಂಘಾಲ್ ಅವರ ಅವರನ್ನೂ ಹೊಣೆಗಾರರನ್ನಾಗಿ ಮಾಡಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
ತಿರುಮಲ ತಿರುಪತಿ ದೇವಸ್ಥಾನಂ ಖರೀದಿ ಸಮಿತಿಯ ಪಾತ್ರವೂ ತೀಕ್ಷ್ಯ ಟೀಕೆಗೆ ಗುರಿಯಾಗಿದೆ. ಟೆಂಡರ್ ನಿಯಮ ಸಡಿಲಿಕೆ ಹಾಗೂ ಸುರಕ್ಷತಾ ಮಾನದಂಡಗಳನ್ನು ದುರ್ಬಲಗೊಳಿಸುವಲ್ಲಿ ಮುಖ್ಯ ಲೆಕ್ಕಾಧಿಕಾರಿ ಒ. ಬಾಲಾಜಿ ಸೇರಿದಂತೆ ವಿಶೇಷ ಆಹ್ವಾನಿತರಾದ ಚೆವಿರೆಡ್ಡಿ ಭಾಸ್ಕರ್ ರೆಡ್ಡಿ, ಭೂಮನ ಕರುಣಾಕರ್ ರೆಡ್ಡಿ ಮತ್ತು ಎಂ. ರಾಮುಲು ಅವರ ಪಾತ್ರವನ್ನೂ ವರದಿ ಪ್ರಸ್ತಾಪಿಸಿದೆ.ಆಗಸ್ಟ್ 3, 2022ರಂದು CFTRI ಪ್ರಯೋಗಾಲಯ ವರದಿಯಲ್ಲಿ ಸಸ್ಯಜನ್ಯ ತೈಲದ ಕಲಬೆರಕೆಯನ್ನು ಸೂಚಿಸುವ ‘ಬೀಟಾ ಸಿಟೊಸ್ಟೆರಾಲ್’ ಪತ್ತೆಯಾಗಿದ್ದರೂ, ಅದರ ಆಧಾರದ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗಿರಲಿಲ್ಲ. ಸರಬರಾಜುದಾರರನ್ನು ಕಪ್ಪುಪಟ್ಟಿಗೆ ಸೇರಿಸುವ ಕ್ರಮವೂ ಜಾರಿಯಾಗಿರಲಿಲ್ಲ. ಇದರ ಪರಿಣಾಮವಾಗಿ ಯಾವುದೇ ಪರೀಕ್ಷೆಯಿಲ್ಲದೆ ಕಲಬೆರಕೆ ತುಪ್ಪದ ಖರೀದಿ ಮುಂದುವರಿದಿತ್ತು ಎಂದು ವರದಿ ಹೇಳಿದೆ.ಖರೀದಿ ನಿಯಮಾವಳಿಗಳ ಚೌಕಟ್ಟಿನಲ್ಲಿದ್ದ ದುರ್ಬಲತೆಗಳೇ ಈ ರೀತಿಯ ಕಲಬೆರಕೆಗೆ ದಾರಿ ಮಾಡಿಕೊಟ್ಟಿವೆ ಎಂಬುದನ್ನೂ ಸಮಿತಿಯ ಬೆಳಕು ಚೆಲ್ಲಿದೆ.








