Wednesday, July 22, 2026
spot_imgspot_img
spot_imgspot_img

ಹುಬ್ಬಳ್ಳಿ: ಮಹಿಳೆ ವಿವಸ್ತ್ರಗೊಳಿಸಿದ ಆರೋಪ: ಪೊಲೀಸರ ವಿರುದ್ಧದ ಆರೋಪಗಳಿಗೆ ಆಯುಕ್ತರ ಸ್ಪಷ್ಟನೆ

- Advertisement -
- Advertisement -

ಹುಬ್ಬಳ್ಳಿ: ಕೇಶ್ವಾಪುರ ಪೊಲೀಸ್ ಠಾಣೆಯ ಪೊಲೀಸರ ವಿರುದ್ಧ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ–ಧಾರವಾಡ ನಗರದಲ್ಲಿ ಭಾರೀ ಚರ್ಚೆ ಹುಟ್ಟಿಕೊಂಡಿದೆ. ಈ ಕುರಿತಂತೆ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸ್ಪಷ್ಟನೆ ನೀಡಿದ್ದು, ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.


ವೈರಲ್ ವಿಡಿಯೋದಲ್ಲಿ ಮಹಿಳೆಯೊಬ್ಬರು ಅರೆಬೆತ್ತಲೆಯ ಸ್ಥಿತಿಯಲ್ಲಿ ಪೊಲೀಸ್ ವಾಹನದೊಳಗೆ ಎಳೆದೊಯ್ಯುತ್ತಿರುವ ದೃಶ್ಯಗಳು ಕಾಣಿಸಿಕೊಂಡಿದ್ದು, ಇದನ್ನು ಬಿಜೆಪಿ ಕಾರ್ಯಕರ್ತೆ ಸುಜಾತಾ ಅಲಿಯಾಸ್ ವಿಜಯಲಕ್ಷ್ಮಿ ಹಂಡಿ ಎಂದು ಗುರುತಿಸಲಾಗಿದೆ. ವಿಡಿಯೋವನ್ನು ಆಕೆಯ ಕುಟುಂಬದ ಸದಸ್ಯರೊಬ್ಬರು ಚಿತ್ರೀಕರಿಸಿ ಹರಿಬಿಟ್ಟಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.


ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತರು, ಮಹಿಳೆಯನ್ನು ಪೊಲೀಸರು ವಿವಸ್ತ್ರಗೊಳಿಸಿಲ್ಲ. ಬಂಧನದ ಬಳಿಕ ಪೊಲೀಸ್ ವಾಹನದೊಳಗೆ ತಾನಾಗಿಯೇ ಬಟ್ಟೆ ಬಿಚ್ಚಿಕೊಂಡು ಪೊಲೀಸರ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ ಎಂದು ತಿಳಿಸಿದರು.


ಘಟನೆ ಹಿನ್ನೆಲೆ
ಜನವರಿ 1ರಂದು ಚಾಲುಕ್ಯ ನಗರದಲ್ಲಿ ಮತದಾರರ ವಿಶೇಷ ಪರಿಷ್ಕರಣೆ (SIR) ಕಾರ್ಯ ನಡೆಯುತ್ತಿದ್ದ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು. ಈ ಸಂದರ್ಭ ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ಮತ್ತು ಕಾಂಗ್ರೆಸ್ ಕಾರ್ಪೋರೇಟರ್‌ಗಳು ಹಾಗೂ ಬೆಂಬಲಿಗರ ನಡುವೆ ವಾಗ್ವಾದ ಉಂಟಾಗಿದೆ ಎನ್ನಲಾಗಿದೆ.


ಈ ಸಂಬಂಧ ಪ್ರಶಾಂತ್ ಎಂಬವರು ಸುಜಾತಾ ಹಂಡಿ ವಿರುದ್ಧ ದೂರು ನೀಡಿದ್ದು, ಅದರ ಆಧಾರದಲ್ಲಿ ಜನವರಿ 5ರಂದು ಪೊಲೀಸರು ಬಂಧನಕ್ಕೆ ಮುಂದಾಗಿದ್ದರು. ಬಂಧನದ ವೇಳೆ ಆಕೆ ಸಂಪೂರ್ಣ ಬಟ್ಟೆ ಧರಿಸಿದ್ದಳು. ಆದರೆ ಪೊಲೀಸ್ ವಾಹನದೊಳಗೆ ಹತ್ತಿಸಿದ ಬಳಿಕ ತಾನಾಗಿಯೇ ಬಟ್ಟೆ ಬಿಚ್ಚಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.


ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ
ಬಂಧನದ ವೇಳೆ ಸುಜಾತಾ ಹಂಡಿ ನಾಲ್ವರು ಪೊಲೀಸ್ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದು, ಕೆಲವರನ್ನು ಬಾಯಿಯಿಂದ ಕಚ್ಚಿರುವ ಘಟನೆ ಕೂಡ ನಡೆದಿದೆ ಎಂದು ಆಯುಕ್ತರು ವಿವರಿಸಿದರು. ಆದರೂ ಮಹಿಳಾ ಪೊಲೀಸ್ ಸಿಬ್ಬಂದಿ ಸಂಯಮ ತೋರಿ ಬೇರೆ ಬಟ್ಟೆ ತಂದು ಆಕೆಗೆ ತೊಡಿಸಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಹೇಳಿದರು. ಈ ಪ್ರಕರಣದಲ್ಲಿ ಸುಜಾತಾ ಹಂಡಿ ವಿರುದ್ಧ ಒಟ್ಟು 9 ಗಂಭೀರ ಪ್ರಕರಣಗಳು ದಾಖಲಾಗಿದ್ದು, ಈ ವರ್ಷದಲ್ಲೇ ನಾಲ್ಕು ಹೊಸ ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿ ನೀಡಲಾಗಿದೆ.


ತನಿಖೆ ಹಾಗೂ ಕಾನೂನು ಕ್ರಮ
ಈ ಘಟನೆಯ ಕುರಿತು ಡಿಸಿಪಿ ಮಟ್ಟದ ತನಿಖೆಗೆ ಸೂಚನೆ ನೀಡಲಾಗಿದೆ. ಜೊತೆಗೆ ಪ್ರಕರಣದ ವಿಡಿಯೋವನ್ನು ವೈರಲ್ ಮಾಡಿದವರ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಸದ್ಯ ಸುಜಾತಾ ಹಂಡಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

- Advertisement -

Related news

error: Content is protected !!