Thursday, March 28, 2024
spot_imgspot_img
spot_imgspot_img

“ನಿಜ ಭಕ್ತಿಗೆ ದೇವರೊಲಿಯುವ”

- Advertisement -G L Acharya panikkar
- Advertisement -

ಮಲ್ಲಿಕಾ ಜೆ ರೈ ಗುಂಡ್ಯಡ್ಕ ಪುತ್ತೂರು

“ಈ ಜಗದಲ್ಲಿ ಸುಳ್ಳಿನ ಬದುಕು ಬಲು ಕಷ್ಟ. ಸತ್ಯದ ಹಾದಿಯಲ್ಲಿ ನಡೆಯುವುದು ಬಹಳ ಸುಲಭವು” ಮೇಲ್ನೋಟಕ್ಕೆ ಈ ವಾಕ್ಯವು ತಮಾಷೆಯೆನಿಸಬಹುದು. ಹೊರನೋಟಕ್ಕೆ ಅದು ತೀರಾ ಅಭಾಸವೆನಿಸಬಹುದು. ಆದರೆ ಒಳಗಣ್ಣಿನಿಂದ ವೀಕ್ಷಿಸಲಾಗಿ ಅದರಂತೆ ನುಡಿದು ನಡೆದಾಗ ವಾಕ್ಯದ ಅರ್ಥ ಗೋಚರಿಸುತ್ತದೆ. ಅರಿವನ್ನು ನೀಡುತ್ತದೆ.

ದಿನದಲ್ಲಿ ಎಷ್ಟು ಸುಳ್ಳು ಹೇಳುತ್ತೇವೆಂಬುದನ್ನು ಪಟ್ಟಿ ಮಾಡಿದಾಗ ಪರಿಸ್ಥಿತಿಯ ಅರಿವಾಗಲು ಸಾಧ್ಯ. ಸುಳ್ಳಿನ ಮಾರ್ಗ ಸೃಷ್ಟಿಸುವ ಮುಖವಾಡಗಳಿಗೆ ಲೆಕ್ಕವೇ ಸಿಗದು. ಸುಳ್ಳೆಂಬುದು ಇಲ್ಲದೇ ಇರುತ್ತಿದ್ದರೆ ಮುಖವಾಡಗಳೂ ಇರುತ್ತಿರಲಿಲ್ಲ. ನೇರಮಾತು, ದಿಟ್ಟ ನಡತೆ. ಎಲ್ಲರೂ ಒಂದೇ.ಭೇದಭಾವವಿಲ್ಲ, ಸರಿಸಮಾನರು ಆಗಬಹುದು.

ದಿನದಲ್ಲಿ ಇಪ್ಪತ್ತನಾಲ್ಕು ಗಂಟೆಗಳೇ ಇದ್ದರೂ ಒಮ್ಮೊಮ್ಮೆ ಮಾಡುವ ಕಾರ್ಯಗಳು ಉತ್ತಮವಾಗಿ ನೆರವೇರುತ್ತವೆ. ಆಗ ಮನಸ್ಸು ಪ್ರಫುಲ್ಲವಾಗುತ್ತದೆ. ಅದೇ ರೀತಿ ತದ್ವಿರುದ್ಧವಾಗಲೂಬಹುದು. ಆಗ ತಾಳ್ಮೆಕೆಟ್ಟು ಸಮಯ ಸರಿದು ಹೋದದ್ದೇ ವಿನಾಃ ಬೇರೆ ಯಾವುದೇ ರೀತಿಯ ಪ್ರಯೋಜನವೂ ಆಗದೇ ನೊಂದು ಮನಸ್ಸು ಬೆಂದು ಹೋಗುವುದೂ ಇದೆ. ಹಾಗೆ ಬೆಂದಾದಾಗಲೇ ದೇವರ ಸನಿಹಕ್ಕೆ ತಲುಪಿದ ಭಾವನೆ ಮೂಡುವ ಸಾಧ್ಯತೆಯೂ ಇಲ್ಲವೆಂದಲ್ಲ. ಕನಕದಾಸರಿಗೂ ಕೂಡಾ ಭಕ್ತಿಯ ಪರಾಕಾಷ್ಠೆ ತಲುಪಿದ್ದು ಇದೇ ಹಂತದಲ್ಲಿ ಇರಲೂಬಹುದು. ಎಲ್ಲರೂ ಛೀಮಾರಿ ಹಾಕಿದರೂ ಹೊರಗೆ ಶಾಂತರೀತಿಯಲ್ಲಿರುವ ಆ ಭಾವವನ್ನು ದೇವರೇ ಕರುಣಿಸಬೇಕಲ್ಲದೇ ಇನ್ನಾರು ಕರುಣಿಸಲು ಸಾಧ್ಯವಿದೆ?


ಕೀಳು ಜಾತಿ ನಿಂದನೆಯಿಂದ ಬೇಸತ್ತ ಮನಸ್ಸು ಕೃಷ್ಣ (ಎಂದರೆ ಕಪ್ಪು) ವರ್ಣದಲ್ಲೂ ಅದು ಕೆಳಸ್ತರವೇ ಆಗಿದೆ. ಹಾಗಾಗಿ ಕೃಷ್ಣನೆಂದರೆ ಕನಕ, ಕನಕನೆಂದರೆ ಕಿಂಡಿ ಪ್ರಖ್ಯಾತವಾಯಿತೆಂದರೂ ತಪ್ಪಲ್ಲ. ಉಡುಪಿ ಎಂದಾಕ್ಷಣ ಮನಸ್ಸಿಗೆ ನೆನಪಾಗುವುದು ಆ ಕೃಷ್ಣ ಕಿಂಡಿ. ಕಿಂಡಿಯೊಳಗೆ ಏನೂ ಕಾಣಿಸಲಾಗದು.ಅದೂ ಒಂದರ್ಥದಲ್ಲಿ ಕಪ್ಪೇ ಹೌದು. ಕಪ್ಪು ಎಂದರೆ ಕತ್ತಲು ಕೂಡಾ ಹೌದು. ದೀಪವೊಂದನ್ನು ಹಚ್ಚಿದಾಗ ಬೆಳಕು ಬರುವಂತೆ, ಕಿಂಡಿಯಲ್ಲಿ ಕೃಷ್ಣನ ಭಕ್ತಿಯ ಹೊಳಪು ಪ್ರಸಾದ ರೂಪದಲ್ಲಿ ದೊರಕಿದ ಬಗೆಯೂ ಆ ಕತ್ತಲೆಯ ಪ್ರಭಾವದಿಂದಲೇ ತಾನೇ. ಹಾಗಾಗಿ ಕಪ್ಪು ಕಪ್ಪೆಂದು ನೀ ಜರೆಯಬೇಡ, ಕೂದಲು ಕಪ್ಪಾಗಿದ್ದರೆ ಮುಖವದು ಶೋಭಿಸುವುದು. ಕಣ್ಣಿಗೆ ಕಾಡಿಗೆ ಹಚ್ಚಿದರೆ ಅಂದವು ಇಮ್ಮಡಿಯಾಗುವುದು.

ಹಾಗಾಗಿ ಜೀವನ ಪ್ರಯಾಣದಲ್ಲಿ ಮುಖವಾಡಗಳನ್ನು ಧರಿಸದೇ, ಇದ್ದದ್ದನ್ನು ಇದ್ದ ಹಾಗೇ ಸ್ವೀಕರಿಸುವ ಗುಣ ಬರಬೇಕು. ಬೇರೆ ಬೇರೆ ಯೋಚನೆಗಳಿಂದ ಮನವನ್ನು ಆಯಾಸ ಗೊಳಿಸಿದಾಗ ವಿಶ್ರಾಂತಿ ಬಯಸುವ ಆ ಕ್ಷಣವೇ ಧ್ಯಾನವಾಗಬೇಕು. ಆಗಲೇ ಸದಾ ನಿನ್ನ ಧ್ಯಾನದೊಳಿರಲು ಎಂದು ಹೃದಯಕ್ಕೆ ಒಪ್ಪತಕ್ಕ ಮಾತು ಸಾರ್ಥಕವಾಗುವುದು. ದೇವರ ವಿಗ್ರಹದ ಮುಂದೆ ನಿಂತು ಒಂದೈದು ನಿಮಿಷ ನೋಡ್ತಾ ಆ ರೂಪವನ್ನು ಮನದೊಳಗೆ ಇಳಿಯಬಿಡಬೇಕು. ತದನಂತರ ಧ್ಯಾನಸ್ಥಿತಿಗೆ ಬರುವಾಗ ಹೃದಯಕ್ಕಿಳಿದ ಆ ಮೂರ್ತಿರೂಪ ಒಳಗಣ್ಣಿನಲ್ಲಿ ಸೂಕ್ಷ್ಮವಾಗಿ ಸಂವೇದಿಸುವುದು ಗೋಚರಿಸುತ್ತದೆ. ಅದು ಕೇವಲ ಒಂದರೆ ಗಳಿಗೆಯೇ ಆಗಿರಲಿ, ಮನವು ಸಂತೃಪ್ತ ಭಾವ ಹೊಂದುವಲ್ಲಿ ಸಫಲವಾಗುತ್ತದೆ. ಪ್ರತಿದಿನವೂ ಅ ಕಾರ್ಯ ನಿರಂತರವಾಗಿ ಸಾಗುತ್ತಿರಬೇಕು.

ಭಕ್ತ ಕನಕದಾಸ. ಪ್ರಾರಂಭದಲ್ಲಿ ತಿಮ್ಮಪ್ಪನಾಗಿ, ಬೆಳೆಯುತ್ತ ತಿಮ್ಮಪ್ಪ ನಾಯಕ, ಆಮೇಲೆ ಕನಕನಾಯಕನೇ ಕನಕದಾಸನಾಗಿ ಪರಿವರ್ತನೆಗೊಂಡ ಕತೆ ನಿಜಕ್ಕೂ ರೋಮಾಂಚನಗೊಳಿಸುತ್ತದೆ. ದೇವರೊಲಿದರೆ ಕೊರಡು ಕೊನರುವುದಯ್ಯಾ ಎಂದು ಇದಕ್ಕೆ ಹೇಳುವುದು. ಮುಖ್ಯವಾಗಿ ನಿಷ್ಕಲ್ಮಶ ಭಕ್ತಿಯಿದ್ದರೆ ಸಾಕು. ಬದುಕು ಪಾವನವಾಗುವುದು. ವಿಜಯನಗರ ಸಾಮ್ರಾಜ್ಯದಲ್ಲಿದ್ದ ಬಂಕಾಪುರ ಸಾಮ್ರಾಜ್ಯದ ೭೮ ಹಳ್ಳಿಗಳ ರಾಜ ಬೀರಪ್ಪ ನಾಯಕ ಹಾಗೂ ಬಚ್ಚಮ್ಮ ದಂಪತಿಗಳಿಗೆ ಬಹಳ ಕಾಲ ಮಕ್ಕಳಾಗದೇ ಇದ್ದುದರಿಂದ ತಿರುಪತಿ ತಿಮ್ಮಪ್ಪನಿಗೆ ( ಗಂಡು ಮಗುವಾದರೆ ನಿನ್ನ ಹೆಸರೇ ಇಡುವೆವೆಂದು) ಪೂಜೆ ಮಾಡಿ ಹುಟ್ಟಿದ ಮಗುವೇ ತಿಮ್ಮಪ್ಪ.ತಂದೆಯ ಅಕಾಲಿಕ ನಿಧನದ ಬಳಿಕ ತಾಯಿ ಮಗನನ್ನು ಮಹಾಶೂರನಾಗುವಂತೆ ಬೆಳೆಸುತ್ತಾಳೆ.

ಪಟ್ಟಾಭಿಷೇಕವು ಆಗಿ ತಿಮ್ಮಪ್ಪ ನಾಯಕನಾದ. ಒಂದಿನ ಹೊಲದಲ್ಲಿ ಬಂಗಾರದ ರಾಶಿಯೇ ದೊರಕಿ ಅದನ್ನು ವಿಜಯನಗರ ಸಾಮ್ರಾಜ್ಯದ ಜನರನ್ನೆಲ್ಲ ಕರೆದು ಮಠ,ಮಂದಿರ, ಛತ್ರ, ವಿದ್ಯಾಭ್ಯಾಸಕ್ಕೆ ಬಡವರಿಗೆ ದಾನ ಮಾಡುತ್ತಾನೆ. ಒಂದು ಗುಂಜಿಯಷ್ಟು ಕನಕ ಮುಟ್ಟದ ಈತ ಕನಕನಾಯಕನಾಗುತ್ತಾನೆ. ಆಗ ನೇರವಾಗಿ ಭಗವಂತನ ದೃಷ್ಟಿ ಈತನೆಡೆಗೆ ಹಾಯುತ್ತದೆ. ಇವನ ಇತಿಹಾಸವನ್ನು ಬದಲಿಸಿ ದಾಸನನ್ನಾಗಿ ಮಾಡಿ ಭವಿಷ್ಯವನ್ನು ಪ್ರಜ್ವಲಿಸುವುದಕ್ಕೋಸ್ಕರ ಆತನ ಕನಸಲ್ಲಿ ಬರುತ್ತಾನೆ. ಭಗವಂತ ಬಂದು ಕನಕ ನೀ ನನಗೆ ದಾಸನಾಗಲೇಬೇಕೆಂಬ ಕನಸು ಬೀಳುತ್ತದೆ. ಆದರೆ ದಾಸನಾಗಲ್ಲ ಎನ್ನುತ್ತಾನೆ.

ತಾಯಿಯಲ್ಲಿ ಈ ವಿಷಯ ಹೇಳಿದಾಗ ತಾಯಿತ ಕಟ್ಟಿಸುತ್ತಾರೆ. ನನ್ನ ಭಕ್ತರಾಗಲು ದುಂಬಾಲು ಬೀಳುವವರೇ ಹೆಚ್ಚು. ನೀನ್ಯಾಕೆ ಒಪ್ಪೊಲ್ಲ ಎಂದು ಭಗವಂತ ಇನ್ನಷ್ಟು ಕಷ್ಟ ಕೊಡಲಾರಂಭಿಸಿದ. ತಾಯಿ ಸತ್ತಳು.ಆದರೂ ಒಪ್ಪಲಿಲ್ಲ. ಮದುವೆಯಾಗಿ ಆರೇ ತಿಂಗಳಿಗೆ ಹೆಂಡತಿ ತೀರಿಹೋದಳು. ಆಗಲೂ ಭಗವಂತ ಕೇಳಿದಾಗ ಒಲ್ಲೆ ಅಂದ. ವಿಜಯನಗರ ಸಾಮ್ರಾಜ್ಯಕ್ಕೆ ದಂಡೆತ್ತಿ ಬಂದ ರಾಜರ ನಡುವೆ ಯುದ್ಧ ಮಾಡಿ ಸೋತು ಹೋದ. ಒಂದರ್ಥದಲ್ಲಿ ಭಗವಂತ ಸೋಲಿಸುತ್ತಾನೆ. ಆಗಲೂ ಬಂದು ಈಗಲಾದರೂ ದಾಸನಾಗುವೆಯಾ ಎಂದಾಗ ಸಾಯಲು ಆಗಲೋ ಈಗಲೋ ಇರುವ ನಾನು ದಾಸನಾಗಿ ಏನು ಮಾಡಬಲ್ಲೆ ಎಂದು ಕೇಳಿದಾಗ ಆತನನ್ನು ಮುಟ್ಟಿ ಗಾಯ ವಾಸಿ ಮಾಡುತ್ತಾನೆ. ಈಗ ಆಗು ಎನ್ನುತ್ತಾನೆ ಭಗವಂತ. ಕಣ್ಣು ಬಿಟ್ಟು ನೋಡಿದಾಗ ಕಾಣುವುದೇನು, ಸಾಕ್ಷಾತ್ ತಿರುಪತಿ ದೇವರೇ ಕಾಣುತ್ತಾರೆ.

ಆನಂದ ಬಾಷ್ಪ ಸುರಿಸಿ ಎಲ್ಲವನ್ನೂ ತ್ಯಜಿಸಿ ಇಗೋ ದಾಸನಾದೆ ಎಂದೆನ್ನುತ್ತ ಬರಿದೆ ಕಂಬಳಿ ಹೊದ್ದುಕೊಂಡು ಮದನಪಳ್ಳಿ ಆಣೆಕಟ್ಟು ಬಳಿಯಲ್ಲಿ ಗುರು ವ್ಯಾಸರಾಯರಲ್ಲಿ ಮಂತ್ರ ಕಲಿಸಿ ಕೊಡುವಂತೆ ಕೇಳಿಕೊಳ್ಳುತ್ತಾನೆ. ನೀನ್ಯಾರು ಎಂದಾಗ ಆತ ಕನಕ ಎಂದಾಗ ತಿರಸ್ಕಾರದಿಂದ ಕೋಣನ ಮಂತ್ರ ಹೇಳೆನ್ನುತ್ತಾರೆ. ಹೋಗಿ ಮರದ ಕೆಳಗೆ ಕುಳಿತ ಕನಕ “ಓಂ ಕೋಣಾಯ ನಮಃ” ಎಂದು ಹೇಳತೊಡಗಿದ. ಆಗಲೇ ಕೋಣವೊಂದು ಪ್ರತ್ಯಕ್ಷವಾಗಿ ಬಂತು.ಗುರುಗಳಿಗೆ ತಿಳಿಸಿದ. ಇರಿಸುಮುರುಸಾದ ಗುರುಗಳು ಆ ಕೋಣನಿಂದ ಆ ದೊಡ್ಡ ಬಂಡೆಕಲ್ಲನ್ನು ಕುಟ್ಟಿ ಪುಡಿ ಮಾಡಲು ಹೇಳಿಸುತ್ತಾರೆ. ಅದರಂತೆ ಕೋಣ ಪುಡಿಮಾಡಿ ಆಣೆಕಟ್ಟು ಕಟ್ಟಲು ಸಹಾಯವಾಯ್ತು. ಇದರಿಂದ ವ್ಯಾಸಕೂಟಕ್ಕೆ ಬರುವಂತೆ ಕನಕನಿಗೆ ಆಹ್ವಾನ ನೀಡುತ್ತಾರೆ.

ಅದಕ್ಕೆ ಒಪ್ಪಿ ಸ್ವಲ್ಪ ತಡವಾಗಿ ಬಂದಾಗ ದ್ವಾರಪಾಲಕ ತಡೆದು ನಿಲ್ಲಿಸಿ ಪ್ರಶ್ನೆ ಕೇಳಿದ. ಕುರುಬರ ಕನಕ ಎಂದು ತಿಳಿದಾಗ ಬ್ರಾಹ್ಮಣ ನಲ್ಲದವನಿಗೆ ಪ್ರವೇಶ ನಿಷಿದ್ಧ ಎನ್ನುತ್ತಾನೆ. ಆತನಲ್ಲಿ ಎಮ್ಮೆ ಕರು ಹಾಕಿದ್ದನ್ನ ಸಾಹಿತ್ಯ ರೂಪದಲ್ಲಿ ಹೇಳೆಂದಾಗ ಉತ್ತರಿಸಿ ಅತನನ್ನು ತಬ್ಬಿಬ್ಬುಗೊಳಿಸಿಬಿಡುತ್ತಾನೆ. ಕೊನೆಗೆ ದ್ವಾರಪಾಲಕ ಕಾಲಿಗೆ ಬಿದ್ದು ನೇರ ಕನಕನನ್ನು ಒಳಗೆ ಬಿಡುತ್ತಾನೆ.

ಅಲ್ಲಿಂದ ಉಡುಪಿಗೆ ಬಾ ಎನ್ನುತ್ತಾನೆ ಕೃಷ್ಣ. ಆದರೆ ಚಳಿಗಾಲದ ಸಮಯ ಬೇರೆ. ಅಲ್ಲಿ ಶೂದ್ರರಿಗೆ ಯಾವುದೇ ಕಾರಣಕ್ಕೂ ಪ್ರವೇಶವಿಲ್ಲ
ಎಂದು ತಳ್ಳಿಹಾಕಿದರು. ಆದರೆ ಕೃಷ್ಣ ನೇ ಕನಕನಿಲ್ಲದ ದಿಕ್ಕು ನನಗೆ ದಿಕ್ಕಲ್ಲ ಎಂದು ತಾನು ನಿಂತ ದಿಕ್ಕನ್ನೇ ಬದಲಾಯಿಸಿ ಕಿಂಡಿಗೆ ಮುಖ ಮಾಡಿ ನಿಲ್ಲುತ್ತಾನೆ.ಕಿಂಡಿಯ ಕನಕನಾಗಿ ಇತಿಹಾಸ ವಾಯಿತು.
ಅಲ್ಲಿಂದ ಮುಂದೆ ತಿರುಪತಿಗೆ ಬಾರೋ ಎನ್ನುತ್ತಾನೆ ಕೃಷ್ಣ. ಚಳಿಗಾಲ ಬೇರೆ. ಉತ್ತರಭಾಗದಿಂದ ತಿರುಪತಿಗೆ ಬೆಟ್ಟದಲ್ಲಿ ನಡೆದೇ ಸಾಗಬೇಕಿತ್ತು. ಅಲ್ಲಿಯೂ ಕೂಡಾ ಬ್ರಾಹ್ಮಣರಿಗೆ ಮಾತ್ರ ಪ್ರವೇಶ. ಹಸಿವಿನಿಂದ ಕಂಗೆಟ್ಟುಹೋಗಿದ್ದ.

ಯಾರೂ ಏನನ್ನೂ ಕೊಡಲಿಲ್ಲ. ರಾತ್ರಿ ಹನ್ನೆರಡಾಗಿತ್ತು. ಕೀರ್ತನೆ ಹಾಡ್ತಾ ದೇವರನ್ನು ಬೈಕೊಂಡ. ಆಗ ತಿರುಪತಿ ತಿಮ್ಮಪ್ಪ ಮಾಯಾಮಾನವ ರೂಪನಾಗಿ ಆತನಲ್ಲಿ ಓಡಿ ಬಂದು ಕನಕ ತಿಮ್ಮಪ್ಪನ ಬೈಯಬೇಡ ಎಂದಂದು ಸೀದಾ ಗರ್ಭಗುಡಿಗೆ ಹೋಗಿ ಅಲ್ಲಿರತಕ್ಕ ನೈವೇದ್ಯ ಹಣ್ಣು ಹಂಪಲು ತಂದುಕೊಟ್ಟು ತಾನೇ ತಿನ್ನಿಸಿ, ಹೊದೆಯಲು ಗರ್ಭಗುಡಿಯಲ್ಲಿದ್ದ ಪೀತಾಂಬರವನ್ನು ತಂದು ತಾನೇ ಹೊದೆಸುತ್ತಾನೆ. ಇತ್ತ ಬೆಳಿಗ್ಗೆ ಬ್ರಾಹ್ಮಣರು ಬಂದಾಗ ಗರ್ಭಗುಡಿಯಲ್ಲಿ ಕಳ್ಳತನವಾಗಿದೆಯೆಂದು ಬೈಯುತ್ತ ಮೂಲೆಯಲ್ಲಿ ಹೊದ್ದು ಮಲಗಿದ್ದ ಕನಕನನ್ನು ಕಂಡು ಯಾರೋ ಪರದೇಸಿ ಭಿಕ್ಷುಕ ಬಂದು ಅಪವಿತ್ರಗೊಳಿಸಿದ್ದಾನೆ ಎಂದು ಆತನನ್ನು ಕಂಬಕ್ಕೆ ಕಟ್ಟಿ ಹಾಕುತ್ತಾರೆ. ಪೈಲ್ವಾನ್ ರಲ್ಲಿ ಹೊಡೆಸುತ್ತಾರೆ.

ಆದರೆ ಆತನಿಗೆ ಏನೂ ಆಗಲ್ಲ‌. ಗರ್ಭಗುಡಿಯಲ್ಲಿ ಅಭಿಷೇಕ ಮಾಡುವಾಗ ರಕ್ತದ ಹೊಳೆ ಹರಿಯುತ್ತದೆ. ಪೂಜಾರರು ಓಡಿ ಬಂದು ಅಡ್ಡ ನಿಂತು ಹೊಡೆಯಬೇಡಿ ಎನ್ನುತ್ತಾರೆ. ದೇವರ ಮಹಿಮೆ ತಿಳಿದು ಕನಕನನ್ನು ಬಿಡಿಸಿ ಕಾಲಿಗೆರಗಿ ಕ್ಷಮಾಪಣೆ ಕೇಳುತ್ತಾರೆ. ಒಂದು ದಿನ ಆತನನ್ನು ಏಕಾಂಗಿಯಾಗಿ ಬಿಟ್ಟು ಗರ್ಭಗುಡಿಗೆ ಪ್ರವೇಶ ಕೊಡುವ ಮೂಲಕ ಭಕ್ತ ಕನಕದಾಸನಾಗಿ ಮಾರ್ಪಾಡು ಆಗುತ್ತಾನೆ. ಭಕ್ತಿಗೆ ಆ ದೇವರೊಲಿಯುತ್ತಾನೆ. ಆ ಪುಣ್ಯ ನಮಗೂ ಸಿಗಲೆಂದು ಪ್ರಾರ್ಥಿಸೋಣ.


ಮಲ್ಲಿಕಾ ಜೆ ರೈ ಗುಂಡ್ಯಡ್ಕ ಪುತ್ತೂರು

- Advertisement -

Related news

error: Content is protected !!