



ನೆಲ್ಯಾಡಿ: ಯಾವುದೇ ಪರವಾನಿಗೆ ಇಲ್ಲದೆ ಮರ ಸಾಗಾಟ ಮಾಡುತ್ತಿದ್ದ ಪ್ರಕರಣ ಪತ್ತೆ ಹಚ್ಚಿರುವ ಉಪ್ಪಿನಂಗಡಿ ವಲಯ ಅರಣ್ಯ ಇಲಾಖಾಧಿಕಾರಿಗಳ ತಂಡ ಮರ,ಲಾರಿ ಹಾಗೂ ಚಾಲಕನನ್ನು ವಶಪಡಿಸಿಕೊಂಡಿರುವ ಘಟನೆ ಡಿ.30ರಂದು ರಾತ್ರಿ ನಡೆದಿದೆ.
ಅರಣ್ಯ ಇಲಾಖಾಧಿಕಾರಿಗಳ ತಂಡ ರಾತ್ರಿ ಗಸ್ತು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಹಾಸನದ ಕಡೆಯಿಂದ ಬಂಟ್ವಾಳದತ್ತ ಸಾಗುತ್ತಿದ್ದ ಲಾರಿ(ಕೆಎ 21, ಬಿ 5787)ಯನ್ನು ಸಂಶಯದ ಮೇರೆಗೆ ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಪೆರಿಯಶಾಂತಿ ಎಂಬಲ್ಲಿ ತಡೆದು ಪರಿಶೀಲನೆ ನಡೆಸಿದ ವೇಳೆ ಲಾರಿಯಲ್ಲಿ ವಿವಿಧ ಕಾಡು ಜಾತಿಗೆ ಸೇರಿದ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಯಾವುದೇ ಪರವಾನಿಗೆ ಪಡೆಯದೇ ಮರದ ದಿಮ್ಮಿ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಲಾರಿ ಚಾಲಕ ಸಕಲೇಶಪುರ ನಿವಾಸಿ ಕಾಂತ ಎಚ್.ಎಸ್.(48 ವ.) ಎಂಬವರನ್ನು ವಶಕ್ಕೆ ಪಡೆದು ಲಾರಿಯಲ್ಲಿದ್ದ ವಿವಿಧ ಕಾಡು ಜಾತಿಯ ಮರದ ದಿಮ್ಮಿ ಹಾಗೂ ಲಾರಿಯನ್ನು ಜಪ್ತಿ ಮಾಡಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಯತೀಂದ್ರ ಅವರ ನೇತೃತ್ವದಲ್ಲಿ ಗಸ್ತು ವನಪಾಲಕರಾದ ವಿನಯಚಂದ್ರ, ಶಿವಾನಂದ ಕುದ್ರಿ, ವಾಹನ ಚಾಲಕ ಕಿಶೋರ್, ದಿನಕೂಲಿ ನೌಕರ ದಿನೇಶ್ ಭಾಗವಹಿಸಿದ್ದರು.








