Wednesday, February 28, 2024
spot_imgspot_img
spot_imgspot_img

ಮಕ್ಕಳ ಕಲಾ ಲೋಕದಿಂದ ಸಾಮಾಜಿಕ ಸ್ವಚ್ಛತಾ ಅಭಿಯಾನದ ಉದ್ಘಾಟನಾ ಕಾರ್ಯಕ್ರಮ

- Advertisement -G L Acharya panikkar
- Advertisement -

ಬಂಟ್ವಾಳ ತಾಲೂಕು ಮಕ್ಕಳ ಕಲಾ ಲೋಕದ ವತಿಯಿಂದ ವಿಶ್ವ ಶಾಂತಿಗಾಗಿ ಸಾಮಾಜಿಕ ಸ್ವಚ್ಛತಾ ಅಭಿಯಾನದ ಉದ್ಘಾಟನಾ ಕಾರ್ಯಕ್ರಮ ಬಿ.ಸಿ. ರೋಡಿನ ಕನ್ನಡ ಭವನದಲ್ಲಿ ನಡೆಯಿತು.

ಶಿವಕುಮಾರ್ ಬೋಳಂತೂರು ಶಾಂತಿಯ ಸಂಕೇತವಾದ ಪಾರಿವಾಳಗಳನ್ನು ಹಾರಿ ಬಿಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ’ಪರಿಸರ ಸ್ವಚ್ಛತೆಯಂತೆ ಸಾಮಾಜಿಕ ಸ್ವಚ್ಛತೆಯನ್ನೂ ಮಾಡಲೇ ಬೇಕಾದ ಕಾಲಘಟ್ಟವಿದು. ಪರಸ್ಪರ ಹೊಂದಾಣಿಕೆ, ಸ್ನೇಹ, ಸಹಜೀವನ, ಸಹಕಾರ, ಪ್ರೀತಿ, ಸಮಯ ಪಾಲನೆ ಮುಂತಾದ ಬದುಕಿನ ಅನಿವಾರ್ಯ ಅಂಶಗಳ ಕೊರತೆಯನ್ನು ನೀಗಿ, ಸದ್ಭಾವ ಪೂರ್ಣ, ಶಾಂತ ಮನಸ್ಕ ಸಮಾಜ ನಿರ್ಮಾಣದಲ್ಲಿ ಸಾಮಾಜಿಕ ಸ್ವಚ್ಛತಾ ಅಭಿಯಾನ ಬೆಂಬಲವಾಗಿ ಕೂಡಿ ಬರಲಿ’ ಎಂದರು.

ಕಾರ್ಯಕ್ರಮದಲ್ಲಿ ಸಾಹಿತಿ ಭಾಸ್ಕರ ಅಡ್ವಳ ವಿರಚಿತ ಘಮ ಘಮಿಸುವ ಗುಟ್ಟು ಎಂಬ ಜೀವನ ಮೌಲ್ಯಗಳ ಚಿಂತನಾ ಕೃತಿಯನ್ನು ಓಜಾಲ ಸ.ಹಿ.ಪ್ರಾ ಶಾಲಾ 7ನೇ ತರಗತಿ ವಿದ್ಯಾರ್ಥಿನಿ, ಎಳೆಯ ಸಾಹಿತಿ ಕುಮಾರಿ ಶ್ರುತಿಕಾ ಬಾಕಿಮಾರು ಅನಾವರಣಗೊಳಿಸಿದರು.

ಈ ಕೃತಿಯು ಸಾಮಾಜಿಕ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಪೂರಕ ಉಪಕರಣದಂತಿದೆ ಎಂದು ಕು.ಶ್ರುತಿಕಾ ಹೇಳಿದರು.
ಕಾರ್ಯಕ್ರದ ಅಧ್ಯಕ್ಷತೆ ವಹಿಸಿದ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶ್ರೀನಾಥ ಉಜಿರೆ ಮಾತನಾಡು ’ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, “ಮಕ್ಕಳೆಡೆಗೆ ಸಾಹಿತ್ಯ” ಅಭಿಯಾನವನ್ನು ಆಯೋಜಿಸಿದೆ. ಸಮಾಜದ ಸ್ವಚ್ಛತೆ ಮತ್ತು ವಿಶ್ವ ಶಾಂತಿಯ ಸ್ಥಾಪನೆಗೆ ಪೂರಕವಾದ ಹೊಸ ಹೊಸ ಕೃತಿಗಳು ಪ್ರಕಟಗೊಳ್ಳಬೇಕು. ಮಕ್ಕಳ ಕಲಾ ಲೋಕ ಪ್ರಕಾಶಿತ ಕೃತಿ ಘಮ ಘಮಿಸುವ ಗುಟ್ಟು. ಕಿರಿಯರು, ಯುವಕರು ಮತ್ತು ಹಿರಿಯರು ಒಟ್ಟುಗೂಡಿ ಮಾಡುವ ಆದರ್ಶ ಚಿಂತನೆಗಳು ಸಮಷ್ಠಿಯ ಹಿತಕ್ಕೆ ಅನುಕೂಲವಾಗುತ್ತವೆ. ಬಂಟ್ವಾಳ ತಾಲೂಕಿನ ವ್ಯಾಪ್ತಿಯಲ್ಲಿರುವ ಮಕ್ಕಳ ಕಲಾ ಲೋಕದ ಚಟುವಟಿಕೆಗಳು ಜಿಲ್ಲಾ ಹಂತಕ್ಕೆ ವಿಸ್ತರಣೆಯಾಗಬೇಕು. ಪರಿಷತ್ತು ಮಕ್ಕಳ ಕಲಾ ಲೋಕದ ಎಲ್ಲ ಚಟುವಟಿಕೆಗಳನ್ನು ಬೆಂಬಲಿಸುತ್ತದೆ’ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹಿರಿಯ ಸಾಹಿತಿ ವಿ.ಬಿ. ಕುಳಮರ್ವ ಕುಂಬಳೆ ಮಾತನಾಡಿ ’ಸಮಯ ಕ್ಲಪ್ತತೆಗೆ ಹೆಸರಾದ ಮಕ್ಕಳ ಕಲಾಲೋಕ ಸಾಮಾಜಿಕ ಸ್ವಚ್ಛತೆಯ ಮೂಲಕ ವಿಶ್ವಶಾಂತಿಯ ಕನಸನ್ನು ಕಾಣಿತ್ತಿದೆ. ಅದರ ಕನಸು ನನಸಾಗಲು ಪ್ರತಿಯೊಬ್ಬರೂ ಹೆಗಲಾಗಬೇಕು. ಮಕ್ಕಳು ಬೆಳಗಿದರೆ ಸಮಾಜ ಬೆಳಗುತ್ತದೆ ಎಂಬ ಕಲಾಲೋಕದ ನಡೆ ಅಭಿನಂದನೀಯ’ ಎಂದರು.

ಸಾಹಿತಿ ಭಾಸ್ಕರ ಅಡ್ವಳ ವಿಶ್ವಶಾಂತಿಗಾಗಿ ಸಾಮಾಜಿಕ ಸ್ವಚ್ಚತೆ ಅಭಿಯಾನದ ಯಶಸ್ಸಿಗೆ ಎಲ್ಲರ ಸಹಕಾರ ಕೋರಿದರು. ಮಕ್ಕಳ ಕಲಾ ಲೋಕದ ಅಧ್ಯಕ್ಷ ರಮೇಶ ಎಂ. ಬಾಯಾರು ಪ್ರಸ್ತಾವನೆ ಮಾತುಗಳನ್ನಾಡಿದರು. ಬಂಟ್ವಾಳ ತಾಲೂಕು ಕ.ಸಾ.ಪ. ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಉಪಸ್ಥಿತರಿದ್ದರು. ಕಲ್ಲಂಗಳ ಕೇಪು ಪ್ರೌಢ ಶಾಲಾ ವಿದ್ಯಾರ್ಥಿನಿಯರಾದ ಅಕ್ಷಿತಾ ಮುಳಿಯ, ಹರ್ಷಿತಾ ಮಣಿಯಾರ ಪಾದೆ ಮತ್ತು ಪೃಥ್ವಿ ಉಬರು ಸ್ಫರ್ತಿ ಗೀತೆ ಹಾಡಿದರು. ಸುರಿಬೈಲು ದಾರುಲ್ ಅಶ್ ಅರಿಯ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿ ಮುಹಮ್ಮದ್ ಸಾಬಿತ್ ನಿರೂಪಿಸಿದರು. ಪುತ್ತೂರು ವಿವೇಕಾನಂದ ಕಾಲೇಜು ವಿದ್ಯಾರ್ಥಿನಿ ಸಹನಾ ಕೋಲ್ಪೆ ಸ್ವಾಗತಿಸಿದರು. ಕಲ್ಲಡ್ಕ ಸರಕಾರಿ ಮಾ.ಹಿ.ಪ್ರಾ ಶಾಲಾ ವಿದ್ಯಾರ್ಥಿನಿ ಸ್ಫೂರ್ತಿ ವಂದಿಸಿದರು.

- Advertisement -

Related news

error: Content is protected !!