


ಭಾರತ ಎರಡನೇ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆದ್ದಿದೆ. ಬಾರ್ಬಡೋಸ್‌ನಲ್ಲಿ ನಡೆದ ಫೈನಲ್‌ನಲ್ಲಿ ಟೀಂ ಇಂಡಿಯಾ ರೋಚಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಏಳು ರನ್‌ಗಳಿಂದ ಸೋಲಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 176 ರನ್ ಗಳಿಸಿತು. ಉತ್ತರವಾಗಿ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗೆ 169 ರನ್ ಗಳಿಸಲಷ್ಟೇ ಶಕ್ತವಾಯಿತು.
ಕಿಂಗ್ ಕೊಹ್ಲಿಯ ಅಬ್ಬರದ ಅರ್ಧ ಶತಕ (76 ರನ್) ರನ್ ಹಾಗೂ ಆಲ್ರೌಂಡರ್ ಅಕ್ಷರ್ ಪಟೇಲ್ ಅವರ ಸ್ಫೋಟಕ ಬ್ಯಾಟಿಂಗ್ (47 ರನ್, 31 ಎಸೆತ, 4 ಸಿಕ್ಸರ್, 1 ಫೋರ್) ನೆರವು ಹಾಗೂ ಕೊನೇ ಕ್ಷಣದ ರೋಚಕ ಹೋರಾಟ ಫಲವಾಗಿ ಭಾರತ ತಂಡ ವಿಶ್ವ ಕಪ್ ಗೆದ್ದುಕೊಂಡಿತು. ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್ಗಳ ರೋಚಕ ಗೆಲುವು ದಾಖಲಿಸಿ ಟ್ರೋಫಿ ಮುಡಿಗೇರಿಸಿಕೊಂಡಿತು. ಭಾರತದ ಪಾಲಿಗೆ ಇದು ಸ್ಮರಣೀಯ ಟ್ರೋಫಿ. ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಅಪೇಕ್ಷಿತ ಚಾಂಪಿಯನ್ ಪಟ್ಟ. ಅತ್ತ ದಕ್ಷಿಣ ಆಫ್ರಿಕಾ ತಂಡ ತನ್ನ ಚೋಕರ್ಸ್ ಹಣೆಪಟ್ಟಿಯನ್ನು ಮತ್ತಷ್ಟು ದಿನ ಕಟ್ಟಿಕೊಳ್ಳುವಂತಾಯಿತು. 4 ದಶಕಗಳ ತನ್ನ ವಿಶ್ವ ಕಪ್ ಅಭಿಯಾನದಲ್ಲಿ ಒಂದೇ ಒಂದು ಟ್ರೋಫಿ ಗೆಲ್ಲಲು ಸಾಧ್ಯವಾಗದೇ ನಿರಾಸೆ ಎದುರಿಸಿತು.
ಇದು ಭಾರತ ತಂಡಕ್ಕೆ 13 ವರ್ಷಗಳ ಬಳಿಕ ಸಿಕ್ಕ ವಿಶ್ವ ಕಪ್ ಹಾಗೂ 17 ವರ್ಷಗಳ ಬಳಿಕ ದೊರೆತ ಟಿ20 ವಿಶ್ವ ಕಪ್. ಭಾರತ ತಂಡ 2007ರ ಉದ್ಘಾಟನಾ ಆವೃತ್ತಿಯ ಟಿ20 ವಿಶ್ವ ಕಪ್ ಗೆದ್ದಿದ್ದರೆ 2011ರ ಏಕ ದಿನ ವಿಶ್ವ ಕಪ್ ಗೆದ್ದುಕೊಂಡಿದೆ.