ವಾಷಿಂಗ್ಟನ್: ಇರಾನ್ ವಿರುದ್ಧದ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದ್ದಾರೆ.

ಟ್ರುಥ್ ಸೋಶಿಯಲ್ ಪೋಸ್ಟ್ ನಲ್ಲಿ ಈ ವಿಷಯ ಬಹಿರಂಗಪಡಿಸಿರುವ ಅವರು, ಅಮೆರಿಕ ತನ್ನ ಗುರಿಗಳನ್ನು ಈಡೇರಿಸಿಕೊಳ್ಳುವ ಸನಿಹಕ್ಕೆ ಬಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಏತನ್ಮಧ್ಯೆ ಶ್ವೇತಭವನ ಹೇಳಿಕೆ ನೀಡಿ, ಈ ಅಭಿಯಾನ ಮುಂದುವರಿಯಲಿದ್ದು, ವಾರದ ಒಳಗೆ ಮುಕ್ತಾಯವಾಗಲಿದೆ ಎಂದು ಸುಳಿವು ನೀಡಿದೆ. ಸಂಘರ್ಷದ ಬಳಿಕ ಮುಚ್ಚಿರುವ ಹಾರ್ಮುಝ್ ಜಲಸಂಧಿಯನ್ನು ಇರಾನ್ 48 ಗಂಟೆಗಳ ಒಳಗಾಗಿ ಯಾವುದೇ ಬೆದರಿಕೆ ಹಾಕದೇ ಸಂಪೂರ್ಣವಾಗಿ ಮುಕ್ತಗೊಳಿಸಬೇಕು ಎಂದು ಟ್ರಂಪ್ ಗಡುವು ವಿಧಿಸಿದ್ದಾರೆ. ಇದಕ್ಕೆ ಬದ್ಧವಾಗದಿದ್ದಲ್ಲಿ ಇರಾನ್‌ನ ವಿವಿಧ ವಿದ್ಯುತ್ ಘಟಕಗಳ ಮೇಲೆ ದಾಳಿ ನಡೆಸಲಾಗುವುದು ಹಾಗೂ ಇದು ಈ ಹಿಂದೆಂದಿಗಿಂತಲೂ ಪ್ರಬಲ ದಾಳಿಯಾಗಿರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.ಟ್ರಂಪ್ ಎಚ್ಚರಿಕೆಗೆ ಕ್ಯಾರೇ ಎನ್ನದ ಇರಾನ್ ದೇಶದ ಇಂಧನ ಮತ್ತು ವಿದ್ಯುತ್ ಮೂಲಸೌಕರ್ಯಗಳ ಮೇಲೆ ಅಮೆರಿಕ ದಾಳಿ ಮಾಡಿದಲ್ಲಿ, ಈ ಭಾಗದಲ್ಲಿರುವ ಅಮೆರಿಕ ಸಂಬಂಧಿತ ವಿದ್ಯುತ್ ಘಟಕಗಳನ್ನು ಗುರಿ ಮಾಡಿ ದಾಳಿ ನಡೆಸಲಾಗುತ್ತದೆ ಎಂದು ಇರಾನ್‌ನ ಯುನಿಫೈಡ್ ಕಂಬ್ಯಾಟೆಂಟ್ ಕಮಾಂಡ್ ಪ್ರತಿಹೇಳಿಕೆ ನೀಡಿದೆ.”ಈ ಹಿಂದೆ ಎಚ್ಚರಿಕೆ ನೀಡಿದಂತೆ ದೇಶದ ಇಂಧನ ಹಾಗೂ ವಿದ್ಯುತ್ ಮೂಲಸೌಕರ್ಯಗಳನ್ನು ಶತ್ರುದೇಶಗಳು ಉಲ್ಲಂಘಿಸಿದಲ್ಲಿ ಈ ಭಾಗದಲ್ಲಿರುವ ಅಮೆರಿಕದ ಎಲ್ಲ ಇಂಧನ, ಮಾಹಿತಿ ತಂತ್ರಜ್ಞಾನ ಹಾಗೂ ಡಿಸೆಲೈನೇಶನ್ ಮೂಲಸೌಕರ್ಯಗಳನ್ನು ಧ್ವಂಸ ಮಾಡಲಾಗುವುದು’ ಎಂದು ಮಿಲಿಟರಿ ಆಪರೇಷನಲ್ ಕಮಾಂಡ್ ಖತಮ್ ಅಲ್ ಅಸ್ಟಿಯಾ ಹೇಳಿದ್ದಾಗಿ ಫಾರ್ಸ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.












