



ಹೊಸದಿಲ್ಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಇಸ್ರೇಲ್-ಲೆಬನಾನ್ ನಡುವಿನ ಕದನ ವಿರಾಮವನ್ನು ಮೂರು ವಾರಗಳವರೆಗೆ ವಿಸ್ತರಿಸಲು ಒಪ್ಪಂದವಾಗಿದೆ ಎಂದು ತಿಳಿಸಿದ್ದಾರೆ.
ಗುರುವಾರ (ಏಪ್ರಿಲ್ 23) ಶ್ವೇತಭವನದಲ್ಲಿ ಇಸ್ರೇಲ್ ಮತ್ತು ಲೆಬನಾನ್ ರಾಯಭಾರಿಗಳೊಂದಿಗೆ ನಡೆದ ಮಾತುಕತೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದ್ದು, “ಸಭೆ ಬಹಳ ಚೆನ್ನಾಗಿ ನಡೆಯಿತು,” ಎಂದು ಟ್ರಂಪ್ ಹೇಳಿದ್ದಾರೆ.
ಕಳೆದ ಶುಕ್ರವಾರ ಜಾರಿಗೆ ಬಂದ 10 ದಿನಗಳ ಕದನ ವಿರಾಮವು ಸೋಮವಾರ ಅಂತ್ಯಗೊಳ್ಳಬೇಕಾಗಿತ್ತು. ಈಗ ಅದನ್ನು ಮೂರು ವಾರಗಳವರೆಗೆ ಮುಂದುವರಿಸಲು ನಿರ್ಧರಿಸಲಾಗಿದೆ. ಕಳೆದ ವಾರದ ನಂತರ ಇದು ಎರಡನೇ ಉನ್ನತ ಮಟ್ಟದ ಮಾತುಕತೆ ಆಗಿದೆ.
“ಹಿಝ್ಬುಲ್ಲಾ ವಿರುದ್ಧ ಲೆಬನಾನ್ ತನ್ನನ್ನು ರಕ್ಷಿಸಿಕೊಳ್ಳಲು ಅಮೆರಿಕ ಸಹಕರಿಸುತ್ತದೆ,” ಎಂದು ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ಅವರನ್ನು ಶೀಘ್ರದಲ್ಲೇ ಭೇಟಿ ಮಾಡುವ ನಿರೀಕ್ಷೆಯಿದೆ ಎಂದೂ ಅವರು ಹೇಳಿದ್ದಾರೆ ಎಂಬುದಾಗಿ ವರದಿ ಮೂಲಕ ತಿಳಿದುಬಂದಿದೆ.








