


ಮೂಡುಬಿದಿರೆ ಪುರಸಭೆಯ ಅಧ್ಯಕ್ಷೆಯಾಗಿ ಜಯಶ್ರೀ ಹಾಗೂ ಉಪಾಧ್ಯಕ್ಷರಾಗಿ ನಾಗರಾಜ್ ಪೂಜಾರಿ ಆಯ್ಕೆಯಾಗಿದ್ದಾರೆ.
ಆಗಸ್ಟ್ 21ರಂದು ಪುರಸಭೆಯ ಮೀಟಿಂಗ್ ಹಾಲ್‌ನಲ್ಲಿ ನಡೆದ ಚುನಾವಣೆಯಲ್ಲಿ ಚುನಾವಣಾಧಿಕಾರಿ, ಮೂಡುಬಿದಿರೆ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ಚುನಾವಣೆ ನಡೆಸಿಕೊಟ್ಟರು. ಬಿಜೆಪಿಯಿಂದ ಸ್ಪರ್ಧಿಸಿ ಚುನಾಯಿತರಾಗಿರುವ ಜಯಶ್ರೀ ಪ್ರಥಮ ಬಾರಿಗೆ ನಾಗರಾಜ್ ಪೂಜಾರಿ ದ್ವಿತೀಯ ಬಾರಿಯ ಪುರಸಭಾ ಸದಸ್ಯರಾಗಿದ್ದಾರೆ. ಚುನಾವಣೆಯಲ್ಲಿ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ಮಮತಾ ಆನಂದ್ ಕುಮಾರ್ ಉಪಾಧ್ಯಕ್ಷ ಸ್ಥಾನಕ್ಕೆ ಕೊರಗಪ್ಪ ಸ್ಪರ್ಧಿಸಿದ್ದರು.
ಮೀಸಲಾತಿಯಂತೆ ಅಧ್ಯಕ್ಷ ಸ್ಥಾನಕ್ಕೆ ಹಿಂ.ವ.ಎ. ಮಹಿಳಾ ಮೀಸಲಾತಿ ದೊರೆತಿದೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯರ ಪಾಲಾಗಿತ್ತು. ಪುರಸಭೆಯ 23 ಸದಸ್ಯ ಬಲದಲ್ಲಿ ಬಿಜೆಪಿ 13 ಕಾಂಗ್ರೆಸ್ 12 ಸದಸ್ಯ ಬಲ ಹೊಂದಿರುವುದರಿಂದ ಬಿಜೆಪಿ ಸರಳ ಬಹುಮತದ ಜಯ ಪಡೆದುಕೊಂಡಿದೆ. ಪುರಸಭಾ ಮುಖ್ಯಧಿಕಾರಿ ಇಂದು ಚುನಾವಣೆಯಲ್ಲಿ ಸಹಕರಿಸಿದರು.
ಚುನಾವಣೆ ನಂತರ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಸಂಸದ ಬ್ರಿಜೇಶ್ ಚೌಟ, ಶಾಸಕ ಉಮಾನಾಥ್ ಕೋಟ್ಯಾನ್, ಬಿಜೆಪಿ ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್ , ಪ್ರಧಾನ ಕಾರ್ಯದರ್ಶಿಗಳಾದ ರಂಜಿತ್ ಪೂಜಾರಿ, ಹರಿಪ್ರಸಾದ್ ಶೆಟ್ಟಿ, ಚುನಾವಣಾ ಉಸ್ತುವಾರಿ ಜಯಂತ್ ಕೋಟ್ಯಾನ್, ಬಿಜೆಪಿ ಮುಖಂಡರಾದ ಕೆ. ಆರ್. ಪಂಡಿತ್, ಮೇಘನಾಥ್ ಶೆಟ್ಟಿ, ಈಶ್ವರ್ ಕಟೀಲ್, ಶಾಂತಿ ಪ್ರಸಾದ್ ಹೆಗ್ಡೆ, ಹಿಂದುಳಿದ ವರ್ಗಗಳ ಮೋರ್ಚಾ ಪ್ರಧಾನ ಕಾರ್ಯದರ್ಶಿ ಭರತ್ ಶೆಟ್ಟಿ, ಯುವ ಮೋರ್ಚಾ ಮಾಜಿ ಅಧ್ಯಕ್ಷ ಅಶ್ವಥ್ ಪಣಪಿಲ ಉಪಸ್ಥಿತರಿದ್ದರು.