



ಕ್ಯಾಲಿಫೋರ್ನಿಯಾ: ಜಾಗತಿಕ ತಂತ್ರಜ್ಞಾನ ದಿಗ್ಗಜ ಸಂಸ್ಥೆಯಾದ ಆ್ಯಪಲ್ ತನ್ನ ನಾಯಕತ್ವದಲ್ಲಿ ಮಹತ್ವದ ಬದಲಾವಣೆಯನ್ನು ಘೋಷಿಸಿದ್ದು, ದೀರ್ಘಕಾಲ ಸಿಇಒ ಆಗಿದ್ದ ಟಿಮ್ ಕುಕ್ ಸ್ಥಾನತ್ಯಾಗ ಮಾಡುತ್ತಿದ್ದಾರೆ. ಅವರ ಜಾಗಕ್ಕೆ ಹಾರ್ಡ್ವೇರ್ ಎಂಜಿನಿಯರಿಂಗ್ ಮುಖ್ಯಸ್ಥರಾಗಿದ್ದ ಜಾನ್ ಟೆರ್ನಸ್ ಅವರನ್ನು ಹೊಸ ಸಿಇಒ ಆಗಿ ನೇಮಕ ಮಾಡಲಾಗಿದೆ.
ಕೃತಕ ಬುದ್ಧಿಮತ್ತೆ(AI) ತಂತ್ರಜ್ಞಾನವು ವೇಗವಾಗಿ ಬೆಳೆಯುತ್ತಿರುವ ಈ ಸಂದರ್ಭದಲ್ಲಿ ಈ ಬದಲಾವಣೆ ನಡೆದಿರುವುದು ಗಮನಾರ್ಹ. ಹೊಸ ಸಿಇಒ ಜಾನ್ ಟೆರ್ನಸ್ ಮುಂದೆ AI ಯುಗದ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಹೊಣೆಗಾರಿಕೆ ಇದೆ.
ತಮ್ಮ ನಿರ್ಗಮನದ ಹಿನ್ನೆಲೆಯಲ್ಲಿ ಸಮುದಾಯಕ್ಕೆ ಭಾವನಾತ್ಮಕ ಪತ್ರ ಬರೆದಿರುವ ಟಿಮ್ ಕುಕ್, “ಈ ಅದ್ಭುತ ಸಂಸ್ಥೆಯನ್ನು ಮುನ್ನಡೆಸುವುದು ನನ್ನ ಜೀವನದ ಅತಿದೊಡ್ಡ ಗೌರವ. ಸ್ಟೀವ್ ಜಾಬ್ಸ್ ಅವರ ಕನಸನ್ನು ಮುಂದುವರಿಸಲು ಪ್ರಯತ್ನಿಸಿದ್ದೇನೆ. ಈಗ ಹೊಸ ನಾಯಕತ್ವಕ್ಕೆ ದಾರಿ ಮಾಡಿಕೊಡುವ ಸಮಯ ಬಂದಿದೆ,” ಎಂದು ಹೇಳಿದ್ದಾರೆ. ಕಂಪನಿಯ ಮಾನವೀಯ ಮೌಲ್ಯಗಳು ಮತ್ತು ಪರಿಸರ ಕಾಳಜಿಯನ್ನೂ ಅವರು ಉಲ್ಲೇಖಿಸಿದ್ದಾರೆ.
2011ರಲ್ಲಿ ಸ್ಟೀವ್ ಜಾಬ್ಸ್ ನಂತರ ಅಧಿಕಾರ ವಹಿಸಿಕೊಂಡ ಕುಕ್, ಆ್ಯಪಲ್ ಅನ್ನು ಜಾಗತಿಕ ಶಕ್ತಿಯಾಗಿ ರೂಪಿಸಿದರು. ಅವರ ಅವಧಿಯಲ್ಲಿ ಕಂಪನಿಯ ಮೌಲ್ಯವು 3 ಟ್ರಿಲಿಯನ್ ಡಾಲರ್ ದಾಟಿತು. ಆ್ಯಪಲ್ ವಾಚ್, ಏರ್ಪಾಡ್ಸ್ ಮತ್ತು ವಿಷನ್ ಪ್ರೊ ಮುಂತಾದ ಉತ್ಪನ್ನಗಳ ಮೂಲಕ ಕಂಪನಿಯ ವ್ಯಾಪ್ತಿಯನ್ನು ವಿಸ್ತರಿಸಿದರು. ಕೇವಲ ಐಫೋನ್ ಮಾರಾಟಕ್ಕೆ ಸೀಮಿತವಾಗದೆ, ಆ್ಯಪಲ್ ಸಂಗೀತ ಮತ್ತು ಐಕ್ಲೌಡ್ ಸೇರಿದಂತೆ ಸೇವಾ ವಲಯದಲ್ಲಿಯೂ ದೊಡ್ಡ ಆದಾಯ ತಂದುಕೊಟ್ಟಿದ್ದಾರೆ. 2030ರೊಳಗೆ ಕಾರ್ಬನ್ ನ್ಯೂಟ್ರಲ್ ಗುರಿಯನ್ನೂ ಅವರು ಘೋಷಿಸಿದ್ದರು.
ಜಾನ್ ಟೆರ್ನಸ್ 2001ರಲ್ಲಿ ಆ್ಯಪಲ್ ಗೆ ಸೇರಿ, ಉತ್ಪನ್ನ ವಿನ್ಯಾಸದಿಂದ ಆರಂಭಿಸಿ ಹಂತ ಹಂತವಾಗಿ ಬೆಳೆಯುತ್ತಾ 2021ರಲ್ಲಿ ಹಾರ್ಡ್ವೇರ್ ಎಂಜಿನಿಯರಿಂಗ್ ವಿಭಾಗದ ಹಿರಿಯ ಉಪಾಧ್ಯಕ್ಷರಾದರು. ಮೊದಲ ತಲೆಮಾರಿನ iPad ಸೇರಿದಂತೆ ಇತ್ತೀಚಿನ ಐಫೋನ್, ಮ್ಯಾಕ್ ಮತ್ತು ‘M-ಸರಣಿ’ ಚಿಪ್ಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.
ಟೆರ್ನಸ್ ಅವರನ್ನು ಸಂಸ್ಥೆಯೊಳಗೆ ತಾಂತ್ರಿಕವಾಗಿ ದಕ್ಷ ಮತ್ತು ವಿಶ್ವಾಸಾರ್ಹ ನಾಯಕ ಎಂದು ಗುರುತಿಸಲಾಗುತ್ತದೆ. ಟಿಮ್ ಕುಕ್ ಕೂಡ ಅವರ ನಾಯಕತ್ವ ಗುಣಗಳನ್ನು ಹಲವು ಬಾರಿ ಮೆಚ್ಚಿಕೊಂಡಿದ್ದಾರೆ. ಟಿಮ್ ಕುಕ್ ತಕ್ಷಣವೇ ಕಂಪನಿಯನ್ನು ತೊರೆಯುವುದಿಲ್ಲ. ಅವರು ಎಕ್ಸಿಕ್ಯೂಟಿವ್ ಚೇರ್ಮನ್ ಆಗಿ ಮುಂದುವರಿದು ಜಾನ್ ಟೆರ್ನಸ್ ಅವರಿಗೆ ಮಾರ್ಗದರ್ಶನ ನೀಡಲಿದ್ದಾರೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.








