

ಕಡಬ: ಅಪ್ರಾಪ್ತ ಕಾಲೇಜ್ ವಿದ್ಯಾರ್ಥಿನಿಯನ್ನು ಪ್ರೀತಿಸುವ ನೆಪದಲ್ಲಿ ದೈಹಿಕ ಸಂಪರ್ಕ ಬೆಳಸಿ ಅದನ್ನು ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂದಿತ ಆರೋಪಿಯನ್ನು ಕಡಬ ತಾಲೂಕು ಕೋಡಿಂಬಾಳ ಗ್ರಾಮದ ಓಂಕಲ್ ನಿವಾಸಿ ಪ್ರವೀಣ್ ಪೂಜಾರಿ ಎಂದು ಗುರುತಿಸಲಾಗಿದೆ.
ಸಂತ್ರಸ್ತೆಯು ಕಾಲೇಜು ವಿದ್ಯಾರ್ಥಿನಿಯಾಗಿದ್ದು ಆಕೆಯನ್ನು ಪ್ರವೀಣ್ ಪ್ರೀತಿಯ ಬಲೆಗೆ ಬೀಳಿಸಿದ್ದ. ಬಳಿಕ ವಿಶ್ವಾಸಗಳಿಸಿ ಬಾಡಿಗೆ ರೂಂಗೆ ಕರೆದೊಯ್ದು ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೆ, ಅದರ ವೀಡಿಯೋ ಚಿತ್ರೀಕರಿಸಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ. ಅನೇಕ ಬಾರಿ ಆಕೆಯನ್ನು ಪುತ್ತೂರು ಬಳಿಯ ಬಾಡಿಗೆ ರೂಂಗೆ ಕರೆದೊಯ್ದು ದೈಹಿಕವಾಗಿ ಬಳಸಿಕೊಂಡಿದ್ದ.
ಆಕೆ ಗರ್ಭಿಣಿಯಾಗದಂತೆ ಮಾತ್ರೆಯನ್ನು ತಂದುಕೊಟ್ಟಿದ್ದ ಅದರ ಜತೆಗೆ ಖಾಸಗಿ ಕ್ಷಣದ ವೀಡಿಯೋಗಳನ್ನು ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ. ಸೋಮವಾರ (ಡಿ.30) ಕುಂಬ್ರದಲ್ಲಿರುವ ಬಾಡಿಗೆ ರೂಂಗೆ ಆಕೆಯನ್ನು ಕರೆದೊಯ್ದಿದ್ದು ಅಲ್ಲೇ ಉಳಿದುಕೊಂಡು ದೈಹಿಕ ಸಂಪರ್ಕ ಬೆಳೆಸಿದ್ದ. ಮರುದಿನ (ಡಿ.31) ರೂಂನಲ್ಲಿ ಇರುವಾಗಲೇ ಬಾಲಕಿ ಜತೆ ತಗಾದೆ ತೆಗೆದು ದೈಹಿಕ ಹಿಂಸೆ ನೀಡಿ ಜಗಳವಾಡಿದ್ದ. ಬಳಿಕ ಬೈಕ್‌ನಲ್ಲಿ ಕರೆದೊಯ್ದು ಫರಂಗಿಪೇಟೆ ಬಳಿ ರಸ್ತೆ ಬದಿ ಬಿಟ್ಟು ಹೋಗಿದ್ದ. ಮನೆಯವರಿಗೆ ವಿಷಯ ತಿಳಿಸಿದ್ದ ಬಾಲಕಿಗೆ ಮನೆಮಂದಿ ಧೈರ್ಯ ತುಂಬಿ ಮನೆಗೆ ಕರೆದುಕೊಂಡು ಬಂದಿದ್ದರು.
ಯುವಕ ಬೇರೆ ಹುಡುಗಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಆ ವಿಷಯವನ್ನು ಮುಚ್ಚಿಟ್ಟು ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾಗಿ ಬಾಲಕಿ ದೂರಿನಲ್ಲಿ ಆರೋಪಿಸಿದ್ದಾರೆ. ದೂರು ಸ್ವೀಕರಿಸಿದ ಕಡಬ ಪೊಲೀಸರು ಸುಳ್ಯದಲ್ಲಿದ್ದ ಯುವಕನನ್ನು ಬಂಧಿಸಿ ಆತನ ವಿರುದ್ಧ ಆಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.