Tuesday, July 1, 2025
spot_imgspot_img
spot_imgspot_img

ಕಾರ್ಗಿಲ್ ವಿಜಯೋತ್ಸವ : ದೇಶ ಕಂಡ ಮಹಾ ಬಲಿದಾನಕ್ಕಿಂದು 25 ವರ್ಷಗಳು

- Advertisement -
- Advertisement -

🖊️ರಾಧಾಕೃಷ್ಣ ಎರುಂಬು

ಕಾರ್ಗಿಲ್‌ ಯುದ್ಧ ನಡೆದು ಇಂದಿಗೆ 25 ವರ್ಷಗಳಾಗಿವೆ. 1999ರ ಮೇ 2 ರಿಂದ ಜುಲೈ 26ರ ನಡುವೆ ಕಾಶ್ಮೀರದ ಕಾರ್ಗಿಲ್‌ ಪ್ರದೇಶದಲ್ಲಿ ಪಾಕಿಸ್ತಾನ ಹಾಗೂ ಭಾರತದ ಗಡಿಭಾಗದ ಉಳಿವಿಗಾಗಿ ಭಾರತೀಯ ಯೋಧರ ಅಳಿವನ್ನು ಕಂಡರೂ ಉಳಿದವರು ತನ್ನ ಮಣ್ಣನ್ನು ಪಡೆದುದಕ್ಕಾಗಿ ಸಂಭ್ರಮಿಸಿದ ದಿನ. ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ಮೇಲೆ ಭಾರತೀಯ ಸಶಸ್ತ್ರ ಪಡೆಗಳ ವಿಜಯದ ಸ್ಮರಣಾರ್ಥ ಜುಲೈ 26 ಅನ್ನು ಕಾರ್ಗಿಲ್ ವಿಜಯ್ ದಿವಸ್ ಅಥವಾ ಕಾರ್ಗಿಲ್‌ ವಿಜಯ ದಿನ ಎಂದು ಆಚರಿಸಲಾಗುತ್ತದೆ. ನಾವು ಹೆಮ್ಮೆಯಿಂದ ಹೇಳುತ್ತೇವೆ ಉತ್ತರ ಕಾಶ್ಮೀರದಿಂದ ದಕ್ಷಿಣ ಕನ್ಯಾಕುಮಾರಿವರೆಗಿನ ಭವ್ಯ ಭಾರತವೆಂದು. ನಮ್ಮೆಲ್ಲರ ಭಾರತದ ಶಿರ ಉಳಿಸಿದ ಧೀರರ ಸ್ಮರಣೆ ಮಾಡುವುದೂ ಹೆಮ್ಮೆಯಾಗಬೇಕು. 1999ರ ಮೇ ಯಿಂದ ಜುಲೈ ವರೆಗಿನ 85 ದಿನಗಳು ಭರತ ಭೂಮಿಗೂ ರಕ್ತಸಿಕ್ತ ದಿನಗಳು. ದೇಶಕ್ಕಾಗಿ ದೇಹವನ್ನೇ ತುಂಡರಿಸಿಕೊಂಡು 527 ಧೀರ ಯೋಧರ ವೀರಮರಣ ಮತ್ತು 1300 ಕ್ಕಿಂತಲೂ ಹೆಚ್ಚು ಸೈನಿಕರು ತನ್ನ ಅಂಗಾಂಗ ವೈಫಲ್ಯಗಳ ತೊಂದರೆಗೊಳಗಾದರು. ಇಷ್ಟೆಲ್ಲ ನಡೆದಿರುವುದು ದೇಶದ ಒಂದು ಭಾಗದ ಉಳಿವಿಗಾಗಿಯಲ್ಲದೆ, ತನ್ನ ಉಳಿವಿಗಾಗಿ ಅಲ್ಲವೆ ಅಲ್ಲ. ಈ ಬಗ್ಗೆ ಆ ಕುಟುಂಬಗಳಿಗೆ ಸೂಕ್ತ ಪರಿಹಾರ ಕೊಟ್ಟಿರಬಹುದಾದರೂ ನಮ್ಮ ಹೆಮ್ಮೆಯ ಭಾರತಕ್ಕೆ ಜೀವ ತೆತ್ತು ಮಾಯವಾದ ಮಗನೋ,ಅಣ್ಣನೋ ಅಥವಾ ಅಪ್ಪನೋ ಮತ್ತೆ ಬರುವುದಕ್ಕುಂಟೇ? ಒಮ್ಮೆ ಯೋಚಿಸಿ. ಅವರ ಕುಟುಂಬಕ್ಕೂ ಅಗಲಿದ ಚೇತನಗಳಿಗೂ ಒಮ್ಮೆ ಸಾಂತ್ವನದ ಮೌನ ನಮ್ಮದಿರಲಿ ಕನಿಷ್ಠ ಈ ದಿನ.ಭಾರತಕ್ಕೆ ವಿಜಯೋತ್ಸವವೇ, ಇಲ್ಲವಾದರೆ ಶಿರವಿಲ್ಲದ ಭರತಖಂಡ ಅಬ್ಬಾ ಊಹಿಸಲು ಅಸಾಧ್ಯ.

ಕಾರ್ಗಿಲ್ ಬೆಟ್ಟದ ತಾಪಮಾನ ಕನಿಷ್ಠವಾಗುತ್ತ ಮೇ ಯಿಂದ ಆಗಸ್ಟ್ ವರೆಗೂ ಸರಿಯಾಗಿರುವುದಿಲ್ಲ. ದೇಶದ ಸೈನ್ಯದ ತುಕ್ಕಡಿಗಳು ತಮ್ಮ ವಾಸ್ತವ್ಯ ಬದಲಾವಣೆ ಸಮಯವಾಗಿರುತ್ತದೆ ಎನ್ನುತ್ತಾರೆ. ಇದನ್ನೇ ಸದುಪಯೋಗ ಮಾಡಿಕೊಂಡ ಉಗ್ರರ ದಾಳಿ ನಮ್ಮವರ ಸಾವಿಗೆ ಕಾರಣವಾದುದು. ಲೈನ್ ಆಫ್ ಕಂಟ್ರೋಲ್ ( LOC ) ಜಮ್ಮು ಮತ್ತು ಕಾಶ್ಮೀರದ ಹಿಂದಿನ ರಾಜಪ್ರಭುತ್ವದ ರಾಜ್ಯವಾದ ಭಾರತ ಮತ್ತು ಪಾಕಿಸ್ತಾನಿ -ನಿಯಂತ್ರಿತ ಭಾಗಗಳ ನಡುವಿನ ಮಿಲಿಟರಿ ನಿಯಂತ್ರಣ ರೇಖೆಯಾಗಿದೆ – ಇದು ಕಾನೂನುಬದ್ಧವಾಗಿ ಗುರುತಿಸಲ್ಪಟ್ಟ ಅಂತರರಾಷ್ಟ್ರೀಯ ಗಡಿಯನ್ನು ರೂಪಿಸುವುದಿಲ್ಲ, ಆದರೆ ವಾಸ್ತವಿಕ ಗಡಿಯಾಗಿ ಕಾರ್ಯನಿರ್ವಹಿಸುತ್ತದೆ. ಈ ಭಾಗದಲ್ಲಿಯೇ ಆಗಿರುವ ದುರಂತ. ‘ಆಪರೇಷನ್ ಬದ್ರಿ’ ಎನ್ನುವ ಕೋಡ್ ನ ಒಳನುಸುಳುವಿಕೆ, ಕಾಶ್ಮೀರ ಮತ್ತು ಲಡಾಕ್ ನಡುವಿನ ಸಂಪರ್ಕ ಕಡಿದು ಹಾಕುವುದು, ಸಿಯಾಚಿನ್ ಗ್ಲೇಸಿಯರ್ ನಿಂದ ಭಾರತೀಯ ಪಡೆಗಳನ್ನು ಹಿಂತೆಗೆದುಕೊಳ್ಳುವ ಗುರಿ ಪಾಕಿಸ್ತಾನದ ಆಕ್ರಮಣದಾಗಿತ್ತು.

ಸುದೀರ್ಘ ಯುದ್ದ ವಾತಾವರಣ, ಪರಮಾಣು ಪರೀಕ್ಷೆ ಸಹಿತವಾಗಿ ನಡೆದು ಜುಲೈ 26,1999ರಂದು ಪಾಕಿಸ್ತಾನದ ಸೇನಾ ಪಡೆಗಳನ್ನು ಅವರ ಅಕ್ರಮಿತ ಸ್ಥಾನಗಳಿಂದ ಹೊರಹಾಕುವುದರ ಮೂಲಕ ಯುದ್ಧ ಅಧಿಕೃತವಾಗಿ ಕೊನೆಗೊಂಡಿತು. ಈ ದಿನವೇ ಕಾರ್ಗಿಲ್ ವಿಜಯೋತ್ಸವ ದಿನಾಚರಣೆ. ಅಂದು ಮತ್ತು ಇಂದು ಮಿಲಿಟರಿಯಾ ಸೈನ್ಯಕ್ಕೆ ಸೇರುವ ವಾಸ್ತವಿಕ ಸ್ಥಿತಿಗತಿಗಳು ಬೇರೆ ಬೇರೆಯೇ. ಹಿಂದೆ ಮುಂಚಿತವಾಗಿ ಯಾವುದೇ ವಿಶೇಷ ತರಬೇತಿಗಳಿಲ್ಲದೆ ತನ್ನ ಹೊಟ್ಟೆಪ್ಪಾಡಿಗಾಗಿ ಉದ್ಯೋಗವನ್ನರಸಿ ಸೇರಿದವರು ಕ್ರಮೇಣ ದೇಶಪ್ರೇಮದೊಂದಿಗೆ ಸೇವೆ ಸಲ್ಲಿಸಿದರು. ಆ ದಿನಗಳು ಕ್ಲಿಷ್ಟವಾಗಿದ್ದರೂ ಸಿಗುವ ಸಂಬಳ, ರಜೆಗಳು ಸೈನಿಕರ ಶ್ರಮಕ್ಕೆ ಅಲ್ಪವೇ. ಆದರೆ ಪ್ರಸ್ತುತ ಹಾಗಲ್ಲ, ಸೇರುವ ಪ್ರತಿ ಸೈನಿಕನಿಗೂ ವಿಶೇಷ ಸೌಲಭ್ಯಗಳು ದೊರೆಯುತ್ತದೆ ಸ್ಥಾನಮಾನಗಳೂ ದೊರೆಯುತ್ತವೆ. ಏನೆ ಆದರೂ ಈ ನೆಲದಲ್ಲಿ ವಾಸಿಸುವ ಸರ್ವರೂ ಯೋಚಿಸಬೇಕಾದುದು ಒಂದೇ ನಮ್ಮ ವಿಶ್ರಾಂತ ಉಸಿರಾಟ ನಡೆಯುತ್ತಿರುವುದು ಗಡಿಕಾಯುವ ಯೋಧರ ಮತ್ತು ಅನ್ನ ನೀಡುವ ರೈತರ ನೆರಳಿನಲ್ಲಿ. ಈ ದಿನದ ಒಂದು ಕ್ಷಣ ದೇಶಕ್ಕಾಗಿ ಪ್ರಾಣ ತೆತ್ತ ಯೋಧರಿಗಿರಲೆಂಬುದೇ ನನ್ನ ಆಶಯ.

🖊️ರಾಧಾಕೃಷ್ಣ ಎರುಂಬು.

- Advertisement -

Related news

error: Content is protected !!