Tuesday, July 21, 2026
spot_imgspot_img
spot_imgspot_img

ಕಾರ್ಕಳ: ಭೀಕರ ರಸ್ತೆ ಅಪಘಾತ; ನಾಲ್ವರು ಮೃತ್ಯು..!

- Advertisement -
- Advertisement -

ಕಾರ್ಕಳ: ಮಿಯಾರು ಗ್ರಾಮದ ಕಂಬಳಕ್ರಾಸ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟು, ಮಗು ಸಹಿತ 9 ಮಂದಿ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.

ಮೃತರನ್ನು ತೂಫನ್ ವಾಹನ ಚಾಲಕ ಮಣ್ಣಪ್ಪ, ಚೇತನ್(27), ರೋಹಿತ್(28) ಹಾಗೂ ಮಲ್ಲಮ್ಮ (50) ಎಂದು ಗುರುತಿಸಲಾಗಿದ್ದು, ಸಂಗೀತ (40), ಕವಿತಾ(38), ಬಸವರಾಜ್(56), ಕಿಶೋರ್(28), ಲಕ್ಷ್ಮೀ(25), ಜ್ಯೋತಿ(25), ಜಯಲಕ್ಷ್ಮೀ(24), ಎರಡು ವರ್ಷದ ಮಗು ಕುಶಲ್ ಸೇರಿದಂತೆ 9 ಮಂದಿ ಗಾಯಗೊಂಡಿದ್ದಾರೆ. ಇವರು ಗುಲ್ಬರ್ಗ ಜಿಲ್ಲೆಯವರಾಗಿದ್ದಾರೆ ಎಂದು ತಿಳಿದುಬಂದಿದೆ.

ತೂಫಾನ್ ವಾಹನದಲ್ಲಿ ಒಂದು ಮಗು ಸೇರಿದಂತೆ 13 ಮಂದಿ ಪ್ರಯಾಣಿಸುತ್ತಿದ್ದು, ಇವರಲ್ಲಿ ತೀವ್ರವಾಗಿ ಗಾಯಗೊಂಡ ಐದು ಮಂದಿ ಯನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಣ್ಣಪುಟ್ಟ ಗಾಯಗೊಂಡ ಮಗು ಅಪಾಯದಿಂದ ಪಾರಾಗಿದ್ದು ಉಳಿದ ಗಾಯಾಳುಗಳನ್ನು ಕಾರ್ಕಳದ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಧಾರ್ಮಿಕ ಕ್ಷೇತ್ರಗಳ ದರ್ಶನಕ್ಕೆಂದು ಗುಲ್ಬರ್ಗದಿಂದ ತೂಫಾನ್ ವಾಹನದಲ್ಲಿ ಹೊರಟಿದ್ದರು. ಉಡುಪಿಗೆ ಬಂದ ಅವರು, ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಬಳಿಕ ಧರ್ಮಸ್ಥಳಕ್ಕೆ ಹೊರಟಿದ್ದು, ಕಾರ್ಕಳ ಮಾರ್ಗವಾಗಿ ಧರ್ಮಸ್ಥಳಕ್ಕೆ ಹೋಗುತ್ತಿದ್ದ ಇವರ ವಾಹನಕ್ಕೆ ಬೆಳ್ತಂಗಡಿಯಿಂದ ಕಾರ್ಕಳಕ್ಕೆ ಅತೀವೇಗದಿಂದ ಬರುತ್ತಿದ್ದ ಖಾಸಗಿ ಬಸ್, ತಿರುವಿನಲ್ಲಿ ರಸ್ತೆಯ ಬಲಭಾಗಕ್ಕೆ ಬಂದು ಮುಖಾಮುಖಿಯಾಗಿ ಢಿಕ್ಕಿ ಹೊಡೆಯಿತು ಎನ್ನಲಾಗಿದೆ.

ಇದರಿಂದ ತುಫಾನ್ ವಾಹನ ಸಂಪೂರ್ಣ ಜಖಂಗೊಂಡಿದ್ದು, ಅದರಲ್ಲಿದ್ದವರು ತೀವ್ರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಇವರ ಪೈಕಿ ಗಂಭೀರವಾಗಿ ಗಾಯಗೊಂಡ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಮಲ್ಲಮ್ಮ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!