




ಬಂಟ್ವಾಳ : ಭಾಷೆಯು ಮನುಷ್ಯ ಮನುಷ್ಯನ ನಡುವಿನ ಒಂದು ಸಂಪರ್ಕ ಮಾಧ್ಯಮವಾಗಿದೆ. ಬ್ಯಾರಿ ಭಾಷೆಯು ಸುಂದರವಾದ ಭಾಷೆಯಾಗಿದ್ದು ಇದನ್ನು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತ ಗೊಳಿಸಬಾರದು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಬ್ಯಾರಿ ಸಾಹಿತ್ಯ ಪರಿಷತ್ ಬಂಟ್ವಾಳ ಇದರ ಸಹಯೋಗದಲ್ಲಿ ಪಾಣೆಮಂಗಳೂರು ಆಲಡ್ಕದ ಎಸ್.ಎಸ್. ಆಡಿಟೋರಿಯಂ ನ , ಮರ್ಹೂಂ ಫಾರೂಕ್ ಗೂಡಿನಬಳಿ ದ್ವಾರ, ಮರ್ಹೂಂ ಮಹಮ್ಮದ್ ಮಾರಿಪಳ್ಳ ಸಭಾಂಗಣ, ಮರ್ಹೂಂ ಹಾಜಿ ಜಿ.ಅಬ್ದುಲ್ ಖಾದರ್ ವೇದಿಕೆಯಲ್ಲಿ ನಡೆದ ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಪುತ್ತೂರು ಸರಕಾರಿ ಪ.ಪೂ.ಕಾಲೇಜು ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಸಮಾರೋಪ ಭಾಷಣದಲ್ಲಿ ಆಂಗ್ಲ ಭಾಷೆಯ ವ್ಯಾಮೋಹದಿಂದ ಮನೆಯಲ್ಲಿ ಮಾತೃ ಭಾಷೆಯನ್ನು ಬಳಸದೆ ಪ್ರತಿಷ್ಟೆಯಿಂದ ಆಂಗ್ಲಭಾಷೆಯ ಬಳಕೆ ಹೆಚ್ಚೆಚ್ಚು ಮಾಡಿದಷ್ಟು ಬ್ಯಾರಿ ಪದಗಳು ನಶಿಸಿ ಹೋಗುತ್ತವೆ. ನಾವು ಯಾವ ಮಟ್ಟಕ್ಕೆ ಏರಿದರೂ ಮನೆಯಲ್ಲಿ ಮಾತೃ ಭಾಷೆಯನ್ನೇ ಬಳಸಬೇಕು, ಬ್ಯಾರಿ ಭಾಷೆಯನ್ನು ಉಳಿಸಲು,ಬೆಳೆಸಲು ನನ್ನಂತಹ ಶಿಕ್ಷಕನಿಂದ, ವಿದ್ಯಾವಂತರಿಂದ, ದೊಡ್ಡ ಉದ್ಯಮಿಗಳಿಂದ ಖಂಡಿತವಾಗಿಯೂ ಸಾಧ್ಯವಿಲ್ಲ, ತಾಳೇ ಹಣ್ಣು ಮಾರಾಟ, ಗುಜರಿ, ಗೂಡಂಗಡಿ ವ್ಯಾಪಾರಿ, ಕೂಲಿ ಕಾರ್ಮಿಕ, ಮೀನು ಮಾರಾಟ ಮಾಡುವಂತಹ ಜನಸಾಮನ್ಯರೇ ದೈನಂದಿನ ಬ್ಯಾರಿ ಪದಗಳ ಬಳಕೆಯ ಮೂಲಕ ಭಾಷೆಯನ್ನು ಉಳಿಸಬಲ್ಲರು ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಜ್ಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಹಾಜಿ ಜಿ.ಎ.ಬಾವ, ಪೂನಾದ ಡಾ.ಡಿ.ವೈ.ಪಾಟೀಲ್ ವಿಶ್ವ ವಿದ್ಯಾನಿಲಯದ ಕುಲ ಸಚಿವ ಡಾ.ಬಿ.ಎಂ.ಬೀರಾನ್ ಮೊಹಿದಿನ್, ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಹಾಜಿ ಎ. ಉಸ್ಮಾನ್ ಕರೋಪಾಡಿ, ಹಿರಿಯ ಪತ್ರಕರ್ತ ಇಬ್ರಾಹಿಂ ಅಡ್ಕಸ್ಥಳ, ಜನಪ್ರಿಯ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಅಬ್ದುಲ್ ಬಶೀರ್ ವಿ.ಕೆ., ಮಂಗಳೂರು ಎ.ಜೆ. ಆಸ್ಪತ್ರೆಯ ಹಿರಿಯ ಸ್ಥಾನಿಕ ವೈದ್ಯೆ ಡಾ. ಹಸೀನಾ ಪೊನ್ನೋಡಿ ಮಾತನಾಡಿ ಶುಭ ಹಾರೈಸಿದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್.ಅದ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ಸಮ್ಮೇಳನದ ಸರ್ವಾಧ್ಯಕ್ಷ ಹಿರಿಯ ಸಾಹಿತಿ, ಕವಿ, ಗಾಯಕ ರಹೀಂ ಬಿ.ಸಿ.ರೋಡ್, ಬಂಟ್ವಾಳ ಬ್ಯಾರಿ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಹಾಜಿ ಮುಹಮ್ಮದ್ ಹನೀಫ್ ಗೋಳ್ತಮಜಲು, ತಾಲೂಕಿನ ವಿವಿಧ ಕ್ಷೇತ್ರಗಳ ಸಾಧಕರಾದ ಡಾ. ಎಂ.ಎಂ. ಶರೀಫ್ (ವೈದ್ಯಕೀಯ), ಅಬ್ಬೋನು ನಂದಾವರ (ಬ್ಯಾರಿ ಜಾನಪದ ), ಅವ್ವಮ್ಮ ಒಕ್ಕೆತ್ತೂರು (ನಾಟಿ ವೈದ್ಯಕೀಯ), ಅಬ್ದುಲ್ ಖಾದರ್ ಮೋನುಂಞಿ ಕಲ್ಲಡ್ಕ (ಪತ್ರಿಕಾ), ಇಸ್ಮಾಯಿಲ್ ಅರಬಿ ಬಂಟ್ವಾಳ (ಸಾಮಾಜಿಕ), ಮೊಹಮ್ಮದ್ ಕೋಡಪದವು (ಪರಿಸರ), ಝುಬೈದಾ ಪರ್ಲೊಟ್ಟು (ಸಾಮುದಾಯಿಕ ಸೇವೆ) ಇವರನ್ನು ಸನ್ಮಾನಿಸಲಾಯಿತು .
ಸಮ್ಮೇಳನ ಸ್ವಾಗತ ಸಮಿತಿ ಕೋಶಾಧಿಕಾರಿ ಹಂಝ ಬಸ್ತಿಕೋಡಿ, ಬ್ಯಾರಿ ಸಾಹಿತ್ಯ ಪರಿಷತ್ ಸಂಚಾಲಕ ಪಿ.ಎ. ರಹೀಮ್, ಕಾರ್ಯದರ್ಶಿ ಮುಹಮ್ಮದ್ ನಂದಾವರ, ಕೋಶಾಧಿಕಾರಿ ಮುಹಮ್ಮದ್ ಸಾಗರ್, ಉಪಾಧ್ಯಕ್ಷರಾದ ಮುಸ್ತಫಾ ಆಲಡ್ಕ, ಯೂಸುಫ್ ಕರಂದಾಡಿ, ಹನೀಫ್ ಬಗ್ಗುಮೂಲೆ, ಪತ್ರಿಕಾ ಕಾರ್ಯದರ್ಶಿ ಪಿ.ಮಹಮ್ಮದ್ ಪಾಣೆಮಂಗಳೂರು, ಅಕಾಡೆಮಿ ಸದಸ್ಯ ಸಂಚಾಲಕ ಅಬೂಬಕ್ಕರ್ ಅನಿಲಕಟ್ಟೆ, ಸದಸ್ಯರಾದ ಮಹಮ್ಮದ್ ಆಲಿ ಬಿ.ಎಸ್, ಮಹಮ್ಮದ್, ತಾಜುದ್ದೀನ್ ಅಮ್ಮುಂಜೆ ಮೊದಲಾದವರು ಉಪಸ್ಥಿತರಿದ್ದರು.
ಬಂಟ್ವಾಳ ಬ್ಯಾರಿ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಲತೀಫ್ ನೇರಳಕಟ್ಟೆ, ಸ್ವಾಗತ ಸಮಿತಿ ಕಾರ್ಯದರ್ಶಿ ಪಿ.ಎಂ ಅಶ್ರಫ್ ಪಾಣೆಮಂಗಳೂರು, ಬ್ಯಾರಿ ಅಕಾಡೆಮಿ ಸದಸ್ಯ ಯು.ಎಚ್. ಖಾಲಿದ್ ಉಜಿರೆ, ಮಾಜಿ ಸದಸ್ಯ ಅಬ್ದುಲ್ ಹಮೀದ್ ಗೋಳ್ತಮಜಲು, ಪತ್ರಕರ್ತ ಬಶೀರ್ ಅಡ್ಯನಡ್ಕ ವಿವಿಧ ಕಾರ್ಯಕ್ರಮ ನಿರೂಪಿಸಿದರು ನಿರೂಪಿಸಿದರು. ಕೊನೆಯಲ್ಲಿ ಸತ್ತಾರ್ ಗೂಡಿನಬಳಿ ನಿರ್ದೇಶನದ “ತೆರು ತಪ್ಪಿರ್ ” ಬ್ಯಾರಿ ನಾಟಕ ಪ್ರದರ್ಶನಗೊಂಡಿತು.








