Tuesday, September 22, 2026
spot_imgspot_img
spot_imgspot_img

ಕಾರ್ತಿಕ್ ಮೇರ್ಲ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ

- Advertisement -
- Advertisement -

ಪುತ್ತೂರು: ಹಿಂದೂ ಜಾಗರಣೆಯ ವೇದಿಕೆಯ ತಾಲೂಕು ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಸುವರ್ಣ ಮೇರ್ಲ (27) ಅವರ ಕೊಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಅಲ್ಲದೆ ತಲಾ 3 ಲಕ್ಷ ರೂಪಾಯಿ ದಂಡ ವಿಧಿಸಿದ್ದು, ದಂಡ ಮೊತ್ತದಲ್ಲಿ ರೂ. 5 ಲಕ್ಷ 90 ಸಾವಿರವನ್ನು ಕಾರ್ತಿಕ್ ಮೇರ್ಲ ತಾಯಿ ಹೇಮಾವತಿಯವರಿಗೆ ನೀಡುವಂತೆ ನ್ಯಾಯಾಲಯ ಸೂಚಿಸಿದೆ.

2019ರ ಸೆಪ್ಟೆಂಬರ್ 3ರಂದು ಸಂಪ್ಯದಲ್ಲಿ ಗಣೇಶೋತ್ಸವದ ಕಾರ್ಯಕ್ರಮದ ವೇಳೆ ಕಾರ್ತಿಕ್ ಮೇರ್ಲ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸರು ಆರ್ಯಾಪು ಮೂಲದ ಸಹೋದರರಾದ ಚರಣ್‌ರಾಜ್, ಕಿರಣ್ ರೈ ಹಾಗೂ ಉಳ್ಳಾಲ ಮೂಲದ ಪ್ರಿತೇಶ್ ಸುಲಾಯ ಮತ್ತು ಅತ್ತಾವರದ ಸ್ಟೀವನ್ ಮೊಂತೇರೋ ಅವರನ್ನು ಆರೋಪಿಗಳನ್ನಾಗಿ ಬಂಧಿಸಿ ತನಿಖೆ ನಡೆಸಿದ್ದರು.

ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ್ ಅವರು, ಆರೋಪಿಗಳಾದ ಕಿರಣ್ ರೈ ಮತ್ತು ಪ್ರಿತೇಶ್ ಸುಲಾಯ ಮೇಲಿನ ಆರೋಪಗಳು ಸಾಬೀತಾಗಿವೆ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಜಯಂತಿ ಸತೀಶ್ ಭಟ್ ಅವರು ದೃಢವಾದ ವಾದ ಮಂಡಿಸಿ ನ್ಯಾಯಾಲಯದಲ್ಲಿ ಸಾಕ್ಷ್ಯಾಧಾರಗಳನ್ನು ಒದಗಿಸಿದ್ದರು.

ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ನಿವೃತ್ತ ಮ್ಯಾನೇಜರ್, ಆರ್ಯಾಪು ಮೇರ್ಲ ನಿವಾಸಿ ರಮೇಶ್ ಸುವರ್ಣ ಅವರ ಪುತ್ರ ಕಾರ್ತಿಕ್ ಅವರನ್ನು 2019ರ ಸೆಪ್ಟೆಂಬರ್ 3ರಂದು ರಾತ್ರಿ ಸಂಪ್ಯ ಪೊಲೀಸ್ ಠಾಣೆ ಮುಂಭಾಗದ ಗಣೇಶೋತ್ಸವ ಪೆಂಡಾಲ್‌ನಲ್ಲಿ ಚೂರಿಯಿಂದ ಇರಿದು ಕೊಲೆ ಮಾಡಲಾಗಿತ್ತು. ಗಣೇಶೋತ್ಸವದ ಶೋಭಾಯಾತ್ರೆ ಮುಗಿದ ಬಳಿಕ ಪೆಂಡಾಲ್‌ನಲ್ಲಿ ಯಕ್ಷಗಾನ ನಡೆಯುತ್ತಿತ್ತು. ಯಕ್ಷಗಾನ ವೀಕ್ಷಿಸುತ್ತಿದ್ದ ಕಾರ್ತಿಕ್ ಅವರೊಂದಿಗೆ ಆರೋಪಿಗಳಾದ ಚರಣ್ ರಾಜ್, ಕಿರಣ್ ರೈ ಹಾಗೂ ಪ್ರಿತೇಶ್ ಶೆಟ್ಟಿ ನಡುವೆ ಮಾತಿನ ಚಕಮಕಿ ನಡೆದಿತ್ತು.ಈ ವೇಳೆ ಚರಣ್ ರಾಜ್ ಮತ್ತು ಕಿರಣ್ ಅವರು ಕಾರ್ತಿಕ್ ಅವರ ಕೈ ಹಿಡಿದಿದ್ದು, ಪ್ರಿತೇಶ್ ಹರಿತವಾದ ಆಯುಧದಿಂದ ಎದೆ ಕೆಳಭಾಗಕ್ಕೆ ಇರಿದಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿತ್ತು. ಗಾಯಗೊಂಡ ಕಾರ್ತಿಕ್ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಅದಾಗಲೇ ಮೃತಪಟ್ಟಿದ್ದರು.

2018ರಲ್ಲಿ ನಡೆದಿದ್ದ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಗಲಾಟೆಯ ಪೂರ್ವದ್ವೇಷವೇ ಕೊಲೆಗೆ ಕಾರಣವೆಂದು ತನಿಖೆಯಲ್ಲಿ ಆರೋಪಿಸಲಾಗಿತ್ತು. ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು.ಈ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿಯಾಗಿದ್ದ ಚರಣ್‌ರಾಜ್ 2022ರ ಜೂನ್‌ನಲ್ಲಿ ಪೆರ್ಲಂಪಾಡಿಯಲ್ಲಿ ನಡೆದ ಹಲ್ಲೆಯಲ್ಲಿ ಮೃತಪಟ್ಟಿದ್ದನು. ಕಾರ್ತಿಕ್ ಮೇರ್ಲ ಕೊಲೆಗೆ ಪ್ರತೀಕಾರವಾಗಿ ಆತನನ್ನು ಹತ್ಯೆ ಮಾಡಲಾಗಿದೆ ಎಂದು ಅಂದು ವರದಿಗಳಲ್ಲಿ ಉಲ್ಲೇಖಿಸಲಾಗಿತ್ತು.

ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಮತ್ತೊಬ್ಬ ಆರೋಪಿ ಮಂಗಳೂರು ಅತ್ತಾವರದ ಸ್ಟೀವನ್ ಮೊಂತೇರೋ ಮೇಲಿನ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ಅವರನ್ನು ಖುಲಾಸೆಗೊಳಿಸಲಾಗಿದೆ.

- Advertisement -

Related news

error: Content is protected !!