Thursday, March 28, 2024
spot_imgspot_img
spot_imgspot_img

ಹಸಿದವರ ಹೊಟ್ಟೆ ತಣಿಸುವ ಮಹತ್ಕಾರ್ಯಕ್ಕೆ ಸಾವಿರ ದಿನಗಳು.ವೆನ್ಲಾಕ್ ಆಸ್ಪತ್ರೆಯಲ್ಲಿ ‘ಎಂ.ಫ್ರೆಂಡ್ಸ್ ಕಾರುಣ್ಯ’

- Advertisement -G L Acharya panikkar
- Advertisement -

ಕಳೆದ ಏಳೂವರೆ ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಕಷ್ಟದಲ್ಲಿರುವ ರೋಗಿಗಳಿಗೆ, ಅಶಕ್ತರಿಗೆ ನೆರವಿನ ಹಸ್ತ ಚಾಚುತ್ತಿರುವ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು “ಕಾರುಣ್ಯ” ಯೋಜನೆಯಡಿ ಹಸಿದವರ ಹೊಟ್ಟೆ ತಣಿಸುವ ಕಾಯಕದಲ್ಲಿ ತೊಡಗಿಸಿಕೊಂಡು ಸಾವಿರ ದಿನಗಳನ್ನು ಪೂರೈಸಿ 3ನೇ ವರ್ಷಕ್ಕೆ ಕಾಲಿಡುತ್ತಿದೆ.

ಮಂಗಳೂರಿನ ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಹವರ್ತಿಗಳಿಂದ ಹಿಡಿದು ಕೋವಿಡ್ ರೋಗಿಗಳ ಸಂಬಂಧಿಕರ ತನಕ ರಾತ್ರಿಯ ಭೋಜನದ ವ್ಯವಸ್ಥೆಯನ್ನು ತನ್ನ ಸದಸ್ಯರ ನೆರವು ಹಾಗೂ ದಾನಿಗಳ ಸಹಕಾರದಿಂದ ಎಂ.ಫ್ರೆಂಡ್ಸ್ ಅಥವಾ ಮರ್ಸಿ ಫ್ರೆಂಡ್ಸ್ ನಿರಂತರವಾಗಿ ಮುಂದುವರಿಸಿಕೊಂಡು ಬಂದಿದೆ. ಮಂಗಳೂರಲ್ಲಿ ಬಂದ್, ಕರ್ಫ್ಯೂ, ಸೆಕ್ಷನ್, ಕೋವಿಡ್ ಲಾಕ್ ಡೌನ್ ಹೀಗೇ ಏನೇ ಸಮಸ್ಯೆ ಇದ್ದರೂ ಒಂದು ದಿನವೂ ನಿಲ್ಲಿಸದೇ ಸತತ ಸಾವಿರ ದಿನಗಳನ್ನು ಪೂರೈಸಿ ಮುಂದುವರಿಸಿಕೊಂಡು ಹೋಗುತ್ತಿದೆ. ಕೆಲವೊಮ್ಮೆ ಸಂಸ್ಥೆಗೆ ಆರ್ಥಿಕ ಸಂಕಷ್ಟ ಎದುರಾದರೂ ಸಾಲ ಮಾಡಿಯಾದರೂ ನಿರಂತರ ಆಹಾರ ನೀಡುತ್ತಿದೆ.

ವೆನ್ಲಾಕ್ ಜಿಲ್ಲಾಸ್ಪತ್ರೆಗೆ ದಕ್ಷಿಣಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯ ಬಡರೋಗಿಗಳಲ್ಲದೇ ಕೊಡಗು, ಚಿಕ್ಕಮಗಳೂರು, ಹಾಸನ, ಬಿಜಾಪುರ, ರಾಯಚೂರು, ಶಿವಮೊಗ್ಗ, ಹಾವೇರಿ, ಉತ್ತರಕನ್ನಡ, ದಾವಣಗೆರೆ ಮೊದಲಾದ ದೂರದ ಜಿಲ್ಲೆಗಳ ಅಶಕ್ತ ರೋಗಿಗಳು ಬಂದು ದಾಖಲಾಗುತ್ತಾರೆ. ಆಸ್ಪತ್ರೆಯಲ್ಲಿ ಸುಮಾರು 1,000 ಹಾಸಿಗೆಗಳಿದ್ದು, ಬಡವರು ಅಶಕ್ತರು ಅನಾಥರು ವೃದ್ಧರು ದಾಖಲಾಗಿ ತಿಂಗಳುಗಟ್ಟಲೆ ಚಿಕಿತ್ಸೆ ಪಡೆಯುವುದೂ ಇದೆ.

ಇಲ್ಲಿ ರೋಗಿಗಳಿಗೆ ಸರಕಾರದ ವತಿಯಿಂದ ದಿನನಿತ್ಯ ಆಹಾರದ ವ್ಯವಸ್ಥೆ ಇದೆ. ಆದರೆ ರೋಗಿಗಳ ಸಹಾಯಕ್ಕಾಗಿ ಜೊತೆಗೆ ಬರುವ ಸಹವರ್ತಿಗಳಿಗೆ ಆಹಾರ ನೀಡುವ ಕ್ರಮ ಇಲ್ಲದ ಕಾರಣ ರೋಗಿಗಳಿಗೆ ನೀಡುವ ಅಹಾರವನ್ನೇ ಸಹವರ್ತಿಗಳು ಕೂಡಾ ಹಂಚಿ ತಿಂದು ಅರ್ಧ ಹೊಟ್ಟೆಯಲ್ಲಿರುತ್ತಾರೆ. ಅನೇಕ ಮಂದಿ ಆಸ್ಪತ್ರೆಯ ಹೊರಗಡೆ ಭಿಕ್ಷೆ ಬೇಡಿ ತಿನ್ನುವ, ಕೆಲವೊಮ್ಮೆ ಖಾಲಿ ಹೊಟ್ಟೆಯಲ್ಲಿರುವ ಪರಿಸ್ಥಿತಿ ಕೂಡಾ ಎದುರಾದದ್ದನ್ನು ಮನಗಂಡ ಎಂ.ಫ್ರೆಂಡ್ಸ್ ತಂಡ ಇಂತಹವರಿಗೆ ಪ್ರತಿದಿನ ರಾತ್ರಿಯ ಉತ್ತಮ ದರ್ಜೆಯ ಭೋಜನವನ್ನು ನೀಡಲು ತೀರ್ಮಾನಿಸಿತು.

ಇದರಂತೆ 2017 ಡಿಸೆಂಬರ್ 18 ರಂದು ಎಂ.ಫ್ರೆಂಡ್ಸ್ “ಕಾರುಣ್ಯ” ಯೋಜನೆ ಪ್ರಾರಂಭವಾಯಿತು. “ಹಸಿದವರ ಹೊಟ್ಟೆ ತಣಿಸಿರಿ” ಎಂಬ ಪ್ರವಾದಿ ಮಹಮ್ಮದರ ವಚನದಂತೆ ಅವರ ಜನ್ಮ ಮಾಸಾಚರಣೆ “ರಬೀವುಲ್ ಅವ್ವಲ್” ತಿಂಗಳ ಕೊನೆಯಲ್ಲಿ ಯೋಜನೆಗೆ ಚಾಲನೆ ದೊರೆಯಿತು. ಪ್ರತಿನಿತ್ಯ ಸಂಜೆ 06 ಗಂಟೆಗೆ ಆವರ್ತಿ ಪ್ರಕಾರ ಎಂ.ಫ್ರೆಂಡ್ಸ್ ನ ಇಬ್ಬರು ಸದಸ್ಯರು ಹಾಗೂ ಸಂಸ್ಥೆಯ ಸಿಬ್ಬಂದಿ ವೆನ್ಲಾಕ್ ಆಸ್ಪತ್ರೆಯ ಫಿಸಿಯೋಥೆರಪಿ ಸೆಂಟರ್ ಹಾಗೂ ಬರ್ನ್ಸ್ ಸೆಂಟರ್ ಬಳಿ ಕ್ಯೂ ನಿಲ್ಲಿಸಿ ಆ ಮೊದಲೇ ಬೆಡ್ ಗೆ ತೆರಳಿ ವಿತರಿಸಿದ ಕೂಪನ್ ನ್ನು ಪಡೆದು ಶಿಸ್ತುಬದ್ಧವಾಗಿ ಆಹಾರ ವಿತರಿಸಲಾರಂಭಿಸಿದರು.

ದಿನನಿತ್ಯ 400 ರಿಂದ 500 ಮಂದಿ ಇದರ ಪ್ರಯೋಜನ ಪಡೆಯಲಾರಂಭಿಸಿದರು. ವಾರದಲ್ಲಿ 3 ದಿನ ಚಪಾತಿ ಮತ್ತು ಗಸಿ, ಎರಡು ದಿನ ಇಡ್ಲಿ ಮತ್ತು ತೋವೆ, ಎರಡು ದಿನ ಸೇಮೆ ಮತ್ತು ಸಾಂಬಾರು ನೀಡಲಾಗುತ್ತಿದೆ. ವಿಶೇಷ ದಿನ ಮತ್ತು ಸಂದರ್ಭಗಳಲ್ಲಿ ಸಿಹಿ ಪಾಯಸ, ಹಣ್ಣುಹಂಪಲುಗಳನ್ನೂ ಸೇರಿಸಿಕೊಡಲಾಗುತ್ತದೆ. ಕೆಲವೊಮ್ಮೆ ಬಿರಿಯಾನಿಯೂ ವಿತರಿಸುವುದಿದೆ. ಪ್ರಸ್ತುತ ವೆನ್ಲಾಕ್ ಕೋವಿಡ್ ಆಸ್ಪತ್ರೆಯಾಗಿರುವುದರಿಂದ ಆಹಾರಕ್ಕಾಗಿ ಹೊರಗೆ ಬರುವ ಹಾಗಿಲ್ಲ. ಕಾರುಣ್ಯದ ರಾತ್ರಿಯ ಭೋಜನ ನೇರವಾಗಿ ಆಸ್ಪತ್ರೆಯ ಅಡಿಗೆಮನೆಗೆ ನೀಡಲಾಗುತ್ತದೆ. ಅಲ್ಲಿಂದ ಆಸ್ಪತ್ರೆ ಸಿಬ್ಬಂದಿಗಳು ವಿತರಿಸುತ್ತಾರೆ.

ಎಂ.ಫ್ರೆಂಡ್ಸ್ ಕಳೆದ ಏಳೂವರೆ ವರ್ಷಗಳಿಂದ ಆರೋಗ್ಯ ಕ್ಷೇತ್ರದಲ್ಲಿ ಅಶಕ್ತರ ಸೇವೆ ಮಾಡುತ್ತಿದೆ. ಈ ಸಂಸ್ಥೆಯಲ್ಲಿ 55 ಸಮಾನಮನಸ್ಕ ಸದಸ್ಯರಿದ್ದಾರೆ. ವಾಟ್ಸಪ್ ಗ್ರೂಪ್ ಆಗಿ 2013 ಜನವರಿ 23 ರಂದು ಪ್ರಾರಂಭವಾದ ಎಂ.ಫ್ರೆಂಡ್ಸ್ ಇಂದು ಟ್ರಸ್ಟ್ ಆಗಿ ಪರಿವರ್ತನೆಯಾಗಿದೆ. ಹಲವಾರು ಸಮಾಜಮುಖಿ ಸೇವೆ ಮಾಡಿದೆ. ಆಸ್ಪತ್ರೆ ಬಿಲ್ ಕಟ್ಟಲು ಅಸಹಾಯರಾದವರಿಗೆ ಧ್ವನಿಯಾಗಿದೆ. ಕೆಲವೊಂದು ಗ್ರಾಮಗಳ ಸಮೀಕ್ಷೆ ನಡೆಸಿ ಅಲ್ಲಿನ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸಿದೆ. ಬಡ ಕುಟುಂಬಕ್ಕೆ ಮಾಸಿಕ ರೇಶನ್, ಟಾಯ್ಲೆಟ್ ನಿರ್ಮಾಣ, ಮನೆ ದುರಸ್ತಿ, ರೋಗಿಗಳಿಗೆ ಪರಿಹಾರ, ಸಂಕಷ್ಟದಲ್ಲಿರುವವರಿಗೆ ಔಷಧಿಯ ವ್ಯವಸ್ಥೆಯನ್ನು ಮಾಡುತ್ತಾ ಬಂದಿದೆ. ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದೆ. ವೆನ್ಲಾಕ್ ಆಸ್ಪತ್ರೆಯ ಕಾರುಣ್ಯ ಯೋಜನೆ ಆಹಾರ ವಿತರಿಸುವಾಗಲೂ ಹಲವಾರು ಬಡವರು ಕಷ್ಟ ಹೇಳಿ ಬರುತ್ತಿದ್ದು, ಅವರಿಗೂ ಸಹಾಯಹಸ್ತ ಚಾಚಿದೆ.

ಕಾರುಣ್ಯ ಯೋಜನೆಗೆ ಮಾಸಿಕ ಎರಡೂ ಕಾಲು ಲಕ್ಷ ರೂಪಾಯಿ ವ್ಯಯಿಸಲಾಗುತ್ತಿದೆ. ಒಂದು ತಿಂಗಳ ಪ್ರಾಯೋಜಕರು, 15 ದಿವಸದ ದಾನಿಗಳು, ದಿನವೊಂದರ ಖರ್ಚು ಭರಿಸುವವರು, ಮಾಸಿಕ 500 ರೂಪಾಯಿ ನೀಡುವ ಸೇವಕರ ಸಹಕಾರದಿಂದ ಮುಂದುವರಿಯುತ್ತಿದ್ದರೂ ಕೆಲವೊಮ್ಮೆ ಆಹಾರಕ್ಕೆ ಹಣದ ನೆರವಿನ ಕೊರತೆ ಎದುರಾಗುತ್ತಿದೆ. ಆದರೂ ಸೃಷ್ಟಿಕರ್ತನ ಅಪಾರ ಅನುಗ್ರಹದಿಂದ ಈ ತನಕ ಕಾರುಣ್ಯ ಯೋಜನೆ ಒಂದು ದಿನವೂ ನಿಲ್ಲದೇ ಮುಂದೆ ಸಾಗಿದೆ. ನಿಮಗೆ ಅಥವಾ ನಿಮ್ಮ ಬಂಧು ಬಳಗ, ಸ್ನೇಹಿತರಿಗೆ ಬಡವರ ಹಸಿವು ನೀಗಿಸುವ ಈ ಯೋಜನೆಗೆ ಕಿಂಚಿತ್ ಸಹಕಾರ ನೀಡುವ ಉದ್ದೇಶವಿದ್ದರೆ ಟ್ರಸ್ಟಿನ ಈ ಬ್ಯಾಂಕ್ ಖಾತೆಗೆ
M Friends Charitable Trust
A/C No: 3058101003352
Bank: Canara Bank
Branch : Vittal
IFSC : CNRB0003058
ಹಣ ಜಮೆ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಅಥವಾ ಜನ್ಮದಿನ, ವಿವಾಹ ವಾರ್ಷಿಕ, ಹಿರಿಯರ ಸ್ಮರಣಾರ್ಥ ಮೊದಲಾದ ವಿಶೇಷ ದಿನಗಳ ಪ್ರಾಯೋಜಕತ್ವ ಪಡೆಯುವುದಾದರೆ ಎಂ.ಫ್ರೆಂಡ್ಸ್ ಮುಖ್ಯಸ್ಥರನ್ನು ಈ ನಂಬ್ರದಲ್ಲಿ
+91 9980880860
+91 9741993313
+91 9448500874
ಸಂಪರ್ಕಿಸಬಹುದು. ಹಸಿದವರಿಗೆ ಅನ್ನ ನೀಡಿದರೆ ಅವರ ಪ್ರಾರ್ಥನೆಯ ಫಲ ದೊರಕುವುದರಲ್ಲಿ ಸಂಶಯವಿಲ್ಲ. ಎಂ.ಫ್ರೆಂಡ್ಸ್ ಕಾರುಣ್ಯ ಯೋಜನೆ ಯಶಸ್ವಿಗಾಗಿ ನಾವೆಲ್ಲಾ ಉದಾರಿಗಳಾಗೋಣ. ಸೃಷ್ಟಿಕರ್ತನು ಅನುಗ್ರಹಿಸಲಿ.
ರಶೀದ್ ವಿಟ್ಲ.

ಕಾರುಣ್ಯ ಸಾವಿರ ದಿನಗಳು.
2020 ಸೆಪ್ಟಂಬರ್ 14 ಸೋಮವಾರ ಸಂಜೆ 4.30ಕ್ಕೆ ಮಂಗಳೂರಿನ IMA ಹಾಲ್ ನಲ್ಲಿ ‘ಕಾರುಣ್ಯ ಸಾವಿರ ದಿನ’ ಕಾರ್ಯಕ್ರಮ ಆಯೋಜಿಸಲಾಗಿದೆ. ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ವೆನ್ಲಾಕ್ ಜಿಲ್ಲಾಸ್ಪತ್ರೆ ಅಧೀಕ್ಷಕರಾದ ಡಾ. ಸದಾಶಿವ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಜುಬೈಲ್ ಉದ್ಯಮಿ ಶರೀಫ್ ವೈಟ್ ಸ್ಟೋನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಎಂ.ಫ್ರೆಂಡ್ಸ್ ಅಧ್ಯಕ್ಷರಾದ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಅಧ್ಯಕ್ಷತೆ ವಹಿಸುವರು.

- Advertisement -

Related news

error: Content is protected !!