


ಉಡುಪಿ: ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಮಾಡಿಯಲ್ಲಿ ನಡೆದಿದೆ.
ಕಲ್ಮಾಡಿ ನಿವಾಸಿ ರತ್ನಾ ಅವರ ಪುತ್ರಿ ಕೃತಿ ಬಂಗೇರಾ (27) ಆತ್ಮಹತ್ಯೆಗೆ ಶರಣಾದ ಯುವತಿ. ಈಕೆ ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದು, ನಗರದ ಕಡಿಯಾಳಿ ಬಳಿಯ ಖಾಸಗಿ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಕಳೆದ ಸುಮಾರು ಐದು ತಿಂಗಳಿಂದ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದಳು ಎನ್ನಲಾಗಿದೆ.
ರತ್ನಾ ಅವರು ಆ.6 ರಂದು ಕೆಲಸದ ನಿಮಿತ್ತ ಮಲ್ಪೆಗೆ ತೆರಳಿದ್ದರು. ಅವರ ಎರಡನೇ ಪುತ್ರಿಯೂ ಕೆಲಸದ ಕಾರಣ ಉಡುಪಿಗೆ ಹೋಗಿದ್ದರು. ಮಧ್ಯಾಹ್ನ ಸುಮಾರು 1 ಗಂಟೆಗೆ ಮನೆಗೆ ಹಿಂದಿರುಗಿದ ವೇಳೆ, ಕೃತಿ ತನ್ನ ತಾಯಿಯನ್ನು ಮನೆಯ ಹೊರಗೆ ಕಳುಹಿಸಿ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದರು. ಬಾಗಿಲು ತಟ್ಟಿದರೂ ಯಾವುದೇ ಪ್ರತಿಕ್ರಿಯೆ ಬರದ ಹಿನ್ನೆಲೆಯಲ್ಲಿ ಅವರು ತಮ್ಮ ಸಹೋದರ ಚಂದ್ರ ಅವರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿದ್ದಾರೆ. ಬಳಿಕ ಬಾಗಿಲು ಒಡೆದು ಮನೆಯೊಳಗೆ ಪ್ರವೇಶಿಸಿದಾಗ, ಬೆಡ್ ರೂಮ್ನಲ್ಲಿ ಫ್ಯಾನ್ಗೆ ವೇಲ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕೃತಿ ಮೃತರಾಗಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಕೃತಿ ಕಳೆದ ಹಲವಾರು ದಿನಗಳಿಂದ ಒತ್ತಡದಲ್ಲಿದ್ದಳು ಎನ್ನಲಾಗಿದ್ದು, ಇದೆ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.








