ಕಟಪಾಡಿ: ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಅಶಕ್ತ ವಯೋವೃದ್ಧ ಬಡ ಮಹಿಳೆಯ ಮನೆಯು ಸಂಪೂರ್ಣ ಹಾನಿಯಾಗಿದ್ದು ಈ ವೇಳೆ ಸತ್ಯದ ತುಳುವೆರ್ ಸಂಘಟನೆಯು ನೂತನ ಮನೆ ನಿರ್ಮಿಸಿಕೊಟ್ಟರು.


ಶಂಕರಪುರ ಶಿವಾನಂದ ನಗರ ಕಾಲೋನಿ ಬಬ್ಬುಸ್ವಾಮಿ ಗುಡಿ ಬಳಿಯ ನಿವಾಸಿ ಪ್ರೇಮಾ ಅವರ ಸಂಕಷ್ಟಕ್ಕೆ ಸ್ಪಂದಿಸಿದ ಸತ್ಯದ ತುಳುವೆರ್ ಸಂಘಟನೆಯು ಸಂಪೂರ್ಣ ಹಾನಿಯಾಗಿದ್ದ ಹಳೆಯ ಮನೆಯನ್ನು ಕೆಡವಿ ಸುಮಾರು 5.5 ಲಕ್ಷ ರೂ. ವೆಚ್ಚದಲ್ಲಿ ನೂತನ ಮನೆ ನಿರ್ಮಿಸಿ ಗೃಹ ಪ್ರವೇಶ ನಡೆಸಿಕೊಟ್ಟರು.

ಯಾವುದೇ ಕ್ಷಣದಲ್ಲಿ ಅಪಾಯವನ್ನು ಸೃಷ್ಟಿಸಲಿದ್ದ ಈಕೆಯ ಹಳೆಯ ಮನೆಯನ್ನು ಕೆಡವಿದ ಈ ಸತ್ಯದ ತುಳುವೆರ್ ತಂಡವು ನೂತನ ಮನೆ ಕಟ್ಟಲು ಮುಹೂರ್ತವಿಟ್ಟು, ಬಳಿಕ ವಿಧಿಸಲ್ಪಟ್ಟ ಲಾಕ್ ಡೌನ್ ಸಂದರ್ಭದ ಸಂಕಷ್ಟವನ್ನೂ ಮೆಟ್ಟಿ ನಿಂತ ಈ ತಂಡವು ಛಲಬಿಡದೆ ದಾನಿಗಳ ಸಹಕಾರವನ್ನು ಪಡೆದುಕೊಂಡು ಇದೀಗ ಸೂಕ್ತ ಧಾರ್ಮಿಕ ಪ್ರಕ್ರಿಯೆಯ ಮೂಲಕ ಗೃಹ ಪ್ರವೇಶವನ್ನು ನಡೆಸಿ ಬಡ ಮಹಿಳೆ ಪ್ರೇಮಾ ಅವರಿಗೆ ಈ ಮನೆಯನ್ನು ಹಸ್ತಾಂತರಿಸಿದೆ.

ಸತ್ಯದ ತುಳುವೆರ್ ಸಂಘಟನೆಯ ಗೌರವಾಧ್ಯಕ್ಷೆ, ಮಾಜಿ ಜಿ.ಪಂ. ಸದಸ್ಯೆ ಗೀತಾಂಜಲಿ ಎಂ. ಸುವರ್ಣ ಅವರು ಸರಕಾರಿ ಸವಲತ್ತು ವಂಚಿತ ಬಡ ಕುಟುಂಬದ ಮಹಿಳೆ ಪ್ರೇಮಾ ಅವರ ಮನೆಯು ಯಾವುದೇ ಕ್ಷಣದಲ್ಲಿ ಅಪಾಯ ತಂದೊಡ್ಡುವ ಸಾಧ್ಯತೆ ಇದ್ದು, ಇದನ್ನು ಮನಗಂಡು ದಾನಿಗಳ ಸಹಕಾರ ಪಡೆದು ಸುಮಾರು 5.5 ಲಕ್ಷ ರೂ ವೆಚ್ಚದ ನೂತನ ಮನೆಯನ್ನು ಕಟ್ಟಿಕೊಡಲಾಗಿದೆ.

ಸಾಹಿತಿ ಸೌಮ್ಯಾ ಪುತ್ರನ್ ಸತ್ಯದ ತುಳುವೆರ್ ಮನೆಯನ್ನು ದೀಪ ಬೆಳಗಿಸಿ, ಗಣೇಶ್ ಪುರೋಹಿತ್ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದ್ದು, ಈ ವೇಳೆ ಸತ್ಯದ ತುಳುವೆರ್ ಸಂಸ್ಥಾಪಕ ಪ್ರವೀಣ್ ಕುರ್ಕಾಲು, ಅಧ್ಯಕ್ಷ ಪ್ರವೀಣ್ ಬಂಗೇರ ಮಲ್ಪೆ, ಉಪಾಧ್ಯಕ್ಷ ಶ್ರೀನಿವಾಸ ತೊಟ್ಟಂ, ವಿನುತ್ ಹಿರಿಯಡ್ಕ, ಪ್ರ.ಕಾರ್ಯದರ್ಶಿ ಮನೀಷ್ ಪೂಜಾರಿ ಕುರ್ಕಾಲು, ಕೋಶಾಕಾರಿ ಶಿವಪ್ರಸಾದ್ ಕುರ್ಕಾಲು, ಚೇತನ್ ಆಚಾರ್ಯ, ತಂಡದ ಸದಸ್ಯರು, ಮಹಿಳಾ ಘಟಕದ ಪ್ರಮುಖರೆಲ್ಲಾ ಉಪಸ್ಥಿತರಿದ್ದರು.

