ವಿಟ್ಲ, ಫೆ. 25: ಕೇರಳದಿಂದ ಪರವಾನಿಗೆ ಇಲ್ಲದೆ ಕೆಂಪುಕಲ್ಲುಗಳನ್ನು ಅಕ್ರಮವಾಗಿ ಕರ್ನಾಟಕಕ್ಕೆ ಸಾಗಿಸುತ್ತಿದ್ದ ಎರಡು ಲಾರಿಗಳನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.ಫೆ. 25ರಂದು ಮಧ್ಯಾಹ್ನ, ಕೇರಳದ ಕಡೆಯಿಂದ ಪೆರುವಾಯಿ ಮಾರ್ಗವಾಗಿ ಲಾರಿಗಳಲ್ಲಿ ಕೆಂಪುಕಲ್ಲುಗಳನ್ನು ಅಕ್ರಮವಾಗಿ ಸಾಗಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ (ಕಾ&ಸು) ರಾಮಕೃಷ್ಣ ಅವರು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದರು.

ಬಂಟ್ವಾಳ ತಾಲೂಕು ಪೆರುವಾಯಿ ಗ್ರಾಮದ ಬೆರಿಪದವು ಪ್ರದೇಶದಲ್ಲಿ ಕೆಂಪುಕಲ್ಲುಗಳನ್ನು ತುಂಬಿಸಿಕೊಂಡು ಬರುತ್ತಿದ್ದ KA-21-C-0562 ಮತ್ತು KA-12-A-2252 ನೋಂದಣಿಯ ಎರಡು ಲಾರಿಗಳನ್ನು ತಡೆದು ಪರಿಶೀಲನೆ ನಡೆಸಲಾಯಿತು.ಪರಿಶೀಲನೆಯ ವೇಳೆ KA-21-C-0562 ಲಾರಿಯ ಚಾಲಕ ವಿಟ್ಲ ನಿವಾಸಿ ಸಾಧಿಕ್ (25) ಹಾಗೂ KA-12-A-2252 ಲಾರಿಯ ಚಾಲಕ ವಿಟ್ಲ ನಿವಾಸಿ ಮೊಹಮ್ಮದ್ (46) ಎಂದು ಗುರುತಿಸಲಾಯಿತು.
ವಿಚಾರಣೆ ವೇಳೆ ಈ ಕೆಂಪುಕಲ್ಲುಗಳನ್ನು ಕೇರಳದ ಧರ್ಮತ್ತಡ್ಕ ಪ್ರದೇಶದಿಂದ ವೇಣು ಎಂಬವರು ಲೋಡ್ ಮಾಡಿಸಿ ಕಳುಹಿಸಿರುವುದಾಗಿ ತಿಳಿಸಿದರು. ಸಾಗಾಟಕ್ಕೆ ಸಂಬಂಧಿಸಿದ ಯಾವುದೇ ಮಾನ್ಯ ಪರವಾನಿಗೆ ಅಥವಾ ದಾಖಲಾತಿಗಳು ಇರಲಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.ಇದರಿಂದ ಇಬ್ಬರು ಚಾಲಕರನ್ನು ವಶಕ್ಕೆ ಪಡೆದು, ಲೋಡ್ ಸಹಿತ ಲಾರಿಗಳನ್ನು ಸ್ವಾಧೀನಪಡಿಸಿಕೊಂಡು ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 49/2026 ರಂತೆ ಪ್ರಕರಣ ದಾಖಲಿಸಲಾಗಿದೆ.
ಕಲಂ 303(2) BNS 2023, 4(1) ಹಾಗೂ 21 MMDR ಕಾಯ್ದೆ 1957 ಮತ್ತು ಕರ್ನಾಟಕ ಮೈನರ್ ಮಿನರಲ್ ನಿಯಮಾವಳಿ 1994ರ ಕಲಂ 3 ಹಾಗೂ 44ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.








