ವಿಟ್ಲ: ಕರ್ನಾಟಕ- ಕೇರಳ ಎಲ್ಲಾ ಗಡಿ ರಸ್ತೆಗಳಿಗೆ ಕೇರಳ ಸರ್ಕಾರ ಮಣ್ಣು ಹಾಕಿ ಮುಚ್ಚಿದೆ. ಇದರಿಂದ ಕರ್ನಾಟಕ- ಕೇರಳ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ.
ಪ್ರಾರಂಭದಲ್ಲಿ ಕೇರಳ ರಾಜ್ಯದಲ್ಲಿ ಕೊರೊನಾ ಸಂಖ್ಯೆ ಹೆಚ್ಚಳವಾಗಿತ್ತು. ಇದರಿಂದ ದ.ಕ ಜಿಲ್ಲಾಡಳಿತ ಎಲ್ಲಾ ಕರ್ನಾಟಕ-ಕೇರಳ ಚೆಕ್ ಪೋಸ್ಟ್ ಗಳನ್ನು ಬಂದ್ ಮಾಡಿತ್ತು. ವಿಟ್ಲ ಠಾಣಾ ವ್ಯಾಪ್ತಿಯ ಸಾರಡ್ಕ ಚೆಕ್ ಪೋಸ್ಟ್ ಗೆ ಬೀಗ ಹಾಕಲಾಗಿತ್ತು. ಅಲ್ಲಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಕೆಲವು ರಸ್ತೆಗಳಿಗೆ ಮಣ್ಣು ಹಾಕಿ ಮುಚ್ಚಿತ್ತು. ಚೆಕ್ ಪೋಸ್ಟ್ ತೆರವುಗೊಳಿಸುವಂತೆ ಕೇರಳ ನಿವಾಸಿಗಳಿಂದ ಭಾರೀ ಒತ್ತಾಯ ಕೇಳಿ ಬಂದಿತ್ತು. ಆದರೆ ಸಫಲವಾಗಿಲ್ಲ.
ವಿಟ್ಲದ ಕನ್ಯಾನದ ಮುಗುಳಿ, ಬೆರಿಪದವು ಸೇರಿದಂತೆ ಕೆಲವು ಒಳ ರಸ್ತೆಗಳ ಮೂಲಕ ಕರ್ನಾಟಕ ಕೇರಳದ ನಿವಾಸಿಗಳು ಸಂಚಾರ ಮಾಡುತ್ತಿದ್ದರು. ಎಸ್ ಎಸ್ ಎಲ್ ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಕನ್ಯಾನ ಸಮೀಪದ ಮುಗುಳಿ ಎಂಬಲ್ಲಿ ಹಾಕಲಾಗಿದ್ದ ಮಣ್ಣನ್ನು ತೆರವುಗೊಳಿಸಲಾಗಿತ್ತು.
ಅದು ತೆರವುಗೊಳಿಸಿ 24 ಗಂಟೆಯಾಗುತ್ತಿದ್ದಂತೆ ಕೇರಳ ಸರ್ಕಾರ ಒಳ ರಸ್ತೆ ಸಹಿತ ತಮ್ಮ ವ್ಯಾಪ್ತಿಯಲ್ಲಿನ ಎಲ್ಲಾ ರಸ್ತೆಯನ್ನು ಬಂದ್ ಮಾಡಿದೆ. ವಿಟ್ಲದಿಂದ ಹಾದುಹೋಗುವ ಮುಗುಳಿ, ಪಾದೆಕಲ್ಲು, ಪದ್ಯಾಣ ಮೊದಲಾದ ಕಡೆಗಳಲ್ಲಿ ಮಣ್ಣು ಹಾಕಿ ಮುಚ್ಚಲಾಗಿದೆ. ಕರ್ನಾಟಕದಿಂದ ಕೇರಳ ಸಂಪರ್ಕಿಸುವ ಎಲ್ಲಾ ರಸ್ತೆಗಳು ಮುಚ್ಚಿದೆ. ಇದರಿಂದ ಕೇರಳ ಹಾಗೂ ಕರ್ನಾಟಕದ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಇದರಿಂದ ಕರ್ನಾಟಕ-ಕೇರಳ ನಡುವೆ ಒಳ ರಸ್ತೆ ಮೂಲಕ ಕದ್ದು ಮುಚ್ಚಿ ಹೋಗುತ್ತಿದ್ದ ಜನರಿಗೆ ಇದೀಗ ಎಲ್ಲಾ ದಾರಿಗಳು ಮುಚ್ಚಲ್ಪಟ್ಟಿದೆ.