Friday, May 3, 2024
spot_imgspot_img
spot_imgspot_img

ಬೆಳ್ಳಿಹಬ್ಬ ಆಚರಿಸಿದ ತಾಳಿತ್ತನೂಜಿ ಶಾಲೆಯಲ್ಲಿ ನಡೆದ ಕೊಳ್ನಾಡು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

- Advertisement -G L Acharya panikkar
- Advertisement -

ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ, ಸಮೂಹ ಸಂಪನ್ಮೂಲ ಕೇಂದ್ರ ಕೊಳ್ನಾಡು ಹಾಗೂ ದ.ಕ.ಜಿ.ಪಂಚಾಯತ್ ಉನ್ನತೀಕರಿಸಿದ ಶಾಲೆ ತಾಳಿತ್ತನೂಜಿ ಇದರ ಸಹಭಾಗಿತ್ವದಲ್ಲಿ ನಡೆದ ಕೊಳ್ನಾಡು ಗ್ರಾಮದ ಪ್ರತಿಭಾ ಕಾರಂಜಿಯ ಉದ್ಘಾಟನೆಯನ್ನು ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಅಶ್ರಪ್ ಕೆ. ಸಾಲೆತ್ತೂರು ಅವರು ದೀಪಬೆಳಗಿಸುವುದರ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು.

ಮುಖ್ಯ ಅತಿಥಿಯಾಗಿ ಕೊಳ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷರೂ, ಸ್ಥಳೀಯ ಪಂ.ಸದಸ್ಯೆ ಕೆ.ಎ.ಅಸ್ಮಾ ಹಸೈನಾರ್ ತಾಳಿತ್ತನೂಜಿ ಮಾತಾಡಿ, 2002 ರಿಂದ ಸರಕಾರವು ಶಿಕ್ಷಣ ಇಲಾಖೆಯ ಮೂಲಕ ಪ್ರತಿಭೆಗಳನ್ನು ಗುರುತಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಮಕ್ಕಳಲ್ಲಿ ಶಿಕ್ಷಣದೊಂದಿಗೆ ಕಲೆಗಳು, ಸೃಜನಾತ್ಮಕ ಕೌಶಲ್ಯಗಳನ್ನು ಹೊರತರಲು ಉತ್ತಮ ವೇದಿಕೆಯಾಗುತ್ತಿದೆ. ಇಂತಹ ವೇದಿಕೆಗಳನ್ನು ಶಿಕ್ಷಕರು ಹಾಗೂ ಪೋಷಕರು ಮಕ್ಕಳನ್ನು ಪ್ರೋತ್ಸಾಹಿಸುವ ಮೂಲಕ ಮಕ್ಕಳ ಮಾನಸಿಕ ಸದೃಡತೆಯೊಂದಿಗೆ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುತ್ತದೆ‌. ಅಧ್ಯಾಪಕರು ಈ ನಿಟ್ಟಿನಲ್ಲಿ ಶಾಲಾ ಹಂತದಲ್ಲಿ ಹೆಚ್ಚು ಹೆಚ್ಚು ಮಕ್ಕಳು ಭಾಗವಹಿಸುವಂತೆ ನೋಡಿಕೊಂಡು ಸೋಲು ಗೆಲುವುಗಳನ್ನು ಸ್ಪರ್ಧಾತ್ಮಕವಾಗಿ ಸ್ವೀಕರಿಸಿ ಪ್ರಶಸ್ತಿ ಗೆಲ್ಲುವುದಕ್ಕಿಂತ ಭಾಗವಹಿಸುವುದಕ್ಕೆ ಪ್ರೇರಣೆ ನೀಡಬೇಕು ಎಂದರು.

ಸ್ವಯಂ ಪ್ರೇರಿತರಾಗಿ ಕ್ಲಸ್ಟರ್ ಮಟ್ಟದಲ್ಲಿ ಈ ಕಾರ್ಯಕ್ರಮವನ್ನು ಸಂಘಟಿಸಲು ಮುಖ್ಯಶಿಕ್ಷಕ ಸುಂದರ್ ನಾಯ್ಕ್ ಮತ್ತು ಶಶಿಕಾಂತ್ ಅವರ ಶೈಕ್ಷಣಿಕ ಕಾಳಜಿಯನ್ನು ಕೊಂಡಾಡಿ ಅಭಿನಂದಿಸಿದರು. ಕಳೆದ ಅವಧಿಯಲ್ಲಿ ಕೊಳ್ನಾಡು ಗ್ರಾಮ ಪಂಚಾಯತ್ ಈ ಶಾಲೆಯ ಹಲವಾರು ಬೇಡಿಕೆಗಳನ್ನು ಈಡೇರಿಸಿದ್ದಲ್ಲದೇ ಮುಂದೆಯೂ ಸದಾ ನಿಮ್ಮ ಬೆಂಬಲಕ್ಕಿದೆ, ಅಲ್ಲದೆ ಮುಂದೆ ತಾಲೂಕು, ಜಿಲ್ಲಾಮಟ್ಟದ ಕಾರ್ಯಕ್ರಮಗಳು ಈ ಶಾಲೆಯಲ್ಲಿ ನಡೆದು ರಾಜ್ಯಮಟ್ಟದಲ್ಲಿ ಬೆಳಗುವಂತಾಗಲಿ ಎಂದು ಹಾರೈಸಿದರು.

ಸೋತವರು ಕುಗ್ಗದೆ, ಗೆದ್ದವರು ಹಿಗ್ಗದೆ ಮುಂದೆಯೂ ಕಾಲ ಮಿಂಚಿಲ್ಲ ಎಂಬ ಭಾವನೆಯೊಂದಿಗೆ ಮುಂದುವರಿಯಿರಿ ಎಂದು ಪುಟಾಣಿ ಮಕ್ಕಳಿಗೆ ಶುಭಕೋರಿದರು. ನಂತರ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಪ್ರಸಾದ್ ಮಾತನಾಡುತ್ತಾ, ಈ ಶಾಲೆಯಲ್ಲಿ ಎಲ್ಲಾ ವ್ಯವಸ್ಥೆಗಳಿದ್ದು ಶಾಲೆಯ ಬೆಳವಣಿಗೆಯಲ್ಲಿ ಶಿಕ್ಷಕರು, SDMC ಪಾತ್ರ ಎದ್ದುಕಾಣುತ್ತಿದೆ. ಒಗ್ಗಟ್ಟಾಗಿ ಕಾರ್ಯನಿರ್ವಹಿಸಿದರೆ ಯಶಸ್ಸು ಖಂಡಿತ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರು BLO, ಕೊರೋನ ಸಂದರ್ಭದಲ್ಲಿ ಮನೆಪಾಠ, ಜನಗಣತಿ ಇತ್ಯಾದಿಗಳಲ್ಲಿ ನಿರಂತರವಾಗಿ ದುಡಿದು ಎಲ್ಲವನ್ನು ನಿಭಾಯಿಸಿಕೊಂಡು ಸದಾ ಕಾರ್ಯಪ್ರವರ್ತರಾಗಿದ್ದಾರೆ. ಇದು ನಮಗೆ ಹೆಮ್ಮೆಯ ಸಂಗತಿ ಎಂದು ತಿಳಿಸಿದರು. ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮವನ್ನು ಸಂಘಟಿಸಲು ನಮ್ಮೊಂದಿಗೆ ಸದಾ ಬೆನ್ನೆಲುಬಾಗಿ ನಿಂತಿರುವ ಸಹೊದ್ಯೋಗಿ ಅಧ್ಯಾಪಕ ವೃಂದ ಮಿತ್ರರನ್ನು ನೆನಪಿಸಿಕೊಂಡು ಮಕ್ಕಳಿಗೆ ಶುಭಹಾರೈಸಿದರು.

ಮಾಜಿ ತಾಲೂಕು ಪಂಚಾಯತ್ ಸದಸ್ಯ ನಾರಾಯಣ ಶೆಟ್ಟಿ ಕುಲ್ಯಾರ್, ತಾಲೂಕು ಶಿಕ್ಷಣ ಸಂಯೋಜಕಿ ಪ್ರತಿಮಾ ಸಮಾರಂಭವನ್ನು ಉದ್ದೇಶಿಸಿ ಮಾತಾಡಿದರು. ಸಭಾಧ್ಯಕ್ಷತೆಯನ್ನು SDMC ಅಧ್ಯಕ್ಷ ಅಬ್ದುಲ್ ಖಾದರ್ ತಾಳಿತ್ತನೂಜಿ ವಹಿಸಿಕೊಂಡಿದ್ದರು. 12 ಶಾಲೆಗಳು ಭಾಗವಹಿಸಿದ್ದು, ಸುರಿಬೈಲ್ ಶಾಲೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. ಆತಿಥ್ಯ ವಹಿಸಿಕೊಂಡಿದ್ದ ಸ್ಥಳೀಯ ತಾಳಿತ್ತನೂಜಿ ಶಾಲೆಯ ಮಕ್ಕಳು 10 ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು. ದ.ಕನ್ನಡ ಜಿಲ್ಲಾ ಅತ್ಯುತ್ತಮ ಶಿಕ್ಷಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕೊಳ್ನಾಡು ಗ್ರಾಮದ ನಾರ್ಶ ಮೈದಾನ ಶಾಲೆಯ ಶಿಕ್ಷಕ ಗೋಪಾಲಕೃಷ್ಣ ನೇರಳಕಟ್ಟೆ ಅವರನ್ನು ಈ ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಅಶ್ರಪ್. ಕೆ‌‌.ಸಾಲೆತ್ತೂರು, ಉಪಾಧ್ಯಕ್ಷ ಕೆ.ಎ.ಅಸ್ಮಾ ಹಸೈನಾರ್ ತಾಳಿತ್ತನೂಜಿ, ತಾಲೂಕು ಪಂಚಾಯತ್ ಮಾಜಿ ಸದಸ್ಯ ನಾರಾಯಣ ಶೆಟ್ಟಿ, SDMC ಅಧ್ಯಕ್ಷ ಅಬ್ದುಲ್ ಖಾದರ್, ಮಾಜಿ ಅಧ್ಯಕ್ಷ ಯೂಸುಫ್ ಟಿ., ತಾಲೂಕು ಶಿಕ್ಷಣ ಸಂಯೋಜಕಿ ಪ್ರತಿಮಾ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ದ.ಕ.ಜಿಲ್ಲಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ರಾಜ್ಯ ಸರಕಾರಿ ದ.ಕನ್ನಡ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಸಹಕಾರ್ಯದರ್ಶಿ ಶಸಿಕಾಂತ್.ಸಿ‌.ಎಚ್, ಕರ್ನಾಟಕ ರಾಜ್ಯ ಗ್ರೇಡ್-2 ದೈಹಿಕ ಶಿಕ್ಷಕರ ಸಂಘ, ಬಂಟ್ವಾಳ ಘಟಕದ ಅಧ್ಯಕ್ಷ ಇಂದುಶೇಖರ್, ರಾಜ್ಯ ಸರಕಾರಿ ನೌಕರರ ಸಂಘ ಬಂಟ್ವಾಳ ತಾಲೂಕು ಘಟಕದ ಸಂತೋಷ್ ಕುಮಾರ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾಶಿಕ್ಷಕರ ಸಂಘದ ಬಂಟ್ವಾಳ ತಾಲೂಕು ಘಟಕದ ಶಶಿ.ಬಿ., ಅಧ್ಯಾಪಕರ ಸಹಕಾರಿ ಸಂಘದ ನಿರ್ದೇಶಕ ಚಿತ್ರಕಲಾ, ಕೊಳ್ನಾಡು ಸಮೂಹ ಸಂಪನ್ಮೂಲ ವ್ಯಕ್ತಿ ಮಲ್ಲಿಕಾರ್ಜುನ್, ಮಂಚಿ ಸಮೂಹ ಸಂಪನ್ಮೂಲ ವ್ಯಕ್ತಿ ಇಂದಿರಾ, ಎಲ್ಲಾ ಶಾಲೆಯ ಅಧ್ಯಾಪಕ ವೃಂದ, SDMC ಯವರು ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯ ಸುಂದರ್ ನಾಯ್ಕ್ ಸ್ವಾಗತಿಸಿ, ಸಿ‌.ಎಚ್. ಶಶಿಕಾಂತ್ ವಂದಿಸಿದರು. ಕಾರ್ಯಕ್ರಮವನ್ನು ‌ಬೇಬಿ ಟೀಚರ್ ನಿರೂಪಿಸಿದರು.

- Advertisement -

Related news

error: Content is protected !!