


ಕೋಝಿಕ್ಕೋಡ್: ಬಸ್ಸಿನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ವೈರಲ್ ಆದ ಬಳಿಕ, 40 ವರ್ಷದ ವ್ಯಕ್ತಿಯೊಬ್ಬರು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಮೃತ ವ್ಯಕ್ತಿಯನ್ನು ಕೋಝಿಕ್ಕೋಡ್ ಜಿಲ್ಲೆಯ ಗೋವಿಂದಪುರ ನಿವಾಸಿ ಎಂದು ಗುರುತಿಸಲಾಗಿದೆ. ಭಾನುವಾರ ಬೆಳಗಿನ ಜಾವ ತಮ್ಮ ನಿವಾಸದಲ್ಲಿ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಘಟನೆ ಸಮಯದಲ್ಲಿ ಅವರ ಪೋಷಕರು ಮನೆಯಲ್ಲೇ ಇದ್ದರು ಎನ್ನಲಾಗಿದೆ. ಪದೇಪದೇ ಕರೆ ಮಾಡಿದರೂ ಪ್ರತಿಕ್ರಿಯೆ ದೊರೆಯದ ಹಿನ್ನೆಲೆಯಲ್ಲಿ ನೆರೆಹೊರೆಯವರ ಸಹಾಯದಿಂದ ಬಾಗಿಲು ಬಲವಂತವಾಗಿ ತೆರೆದಾಗ, ಅವರು ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜನದಟ್ಟಣೆಯ ಬಸ್‌ನಲ್ಲಿ ಪ್ರಯಾಣಿಸುವ ವೇಳೆ ಉದ್ದೇಶಪೂರ್ವಕವಾಗಿ ಲೈಂಗಿಕ ಉದ್ದೇಶದಿಂದ ಸ್ಪರ್ಶಿಸಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಪೋಸ್ಟ್ ಮಾಡಿದ್ದರು. ಪಯ್ಯನ್ನೂರು ರೈಲು ನಿಲ್ದಾಣದಿಂದ బಸ್ ನಿಲ್ದಾಣದವರೆಗೆ ಪ್ರಯಾಣಿಸುವ ಸಂದರ್ಭ ಈ ವೀಡಿಯೊವನ್ನು ಚಿತ್ರೀಕರಿಸಲಾಗಿದೆ ಎನ್ನಲಾಗಿದ್ದು, ಅದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡಿತ್ತು. ಈ ಕ್ಲಿಪ್ 20 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಗಳಿಸಿ ಭಾರೀ ಚರ್ಚೆಗೆ ಕಾರಣವಾಗಿತ್ತು.
ವೀಡಿಯೊ ವೈರಲ್ ಆದ ನಂತರ ಮೃತ ವ್ಯಕ್ತಿ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂದು ಸಂಬಂಧಿಕರು ಹಾಗೂ ಸ್ನೇಹಿತರು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ನಡೆದ ಆರೋಪಗಳಿಂದಾಗಿ ಅವರ ಮಾನಹಾನಿ ನಡೆದಿದೆ ಎಂದು ಕುಟುಂಬದವರು ಆರೋಪಿಸಿದ್ದು, ಇದು ಆನ್‌ಲೈನ್ ಪ್ರಚಾರಕ್ಕಾಗಿ ರಚಿಸಲಾದ ವೀಡಿಯೊವಾಗಿರಬಹುದು ಎಂದು ಹೇಳಿದ್ದಾರೆ.








