
ಕುಂದಾಪುರ: ಕೆಂಪು ಕಲ್ಲುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಚಾಲಕನೊಬ್ಬನನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಆತನಿಂದ 19 ಸಾವಿರ ರೂಪಾಯಿ ಮೌಲ್ಯದ 450 ಕೆಂಪು ಕಲ್ಲು ಮತ್ತು ಟಿಪ್ಪರ್ ವಶ ಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಬಾಗಲಕೋಟೆಯ ಇಳಕಲ್ ಮುರಡಿ ಗ್ರಾಮದ ಸೋಮಪ್ಪ (35) ಎಂದು ಗುರುತಿಸಲಾಗಿದೆ.
ಕುಂದಾಪುರ ಪೊಲೀಸ್ ನಿರೀಕ್ಷಕ ನಂಜಾನಾಯ್ಕ್ ಎನ್. ಕುಂದಾಪುರ ತಾಲೂಕು ಗೋಪಾಡಿ ಗ್ರಾಮದ ಶಾಂತಿನಗರ ಜಂಕ್ಷನ್ ಚೆಕ್ ಪೋಸ್ಟ್‌ನಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ವಕ್ವಾಡಿ ಕಡೆಯಿಂದ ಬಂದ ಟಿಪ್ಪರನ್ನು ನಿಲ್ಲಿಸಿ ಪರಿಶೀಲಿಸಿದಾಗ ಅದರಲ್ಲಿ ಕೆಂಪು ಕಲ್ಲು ಇರುವುದು ಕಂಡು ಬಂದಿತ್ತು.
ಟಿಪ್ಪರ್ ವಾಹನದ ಚಾಲಕ ಸೋಮಪ್ಪನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಬಜಪೆ ಸಮೀಪದ ಸುಂಕಲಪದವು ದಿವೇಶ್ ಎಂಬವರ ಜಾಗದಲ್ಲಿರುವ ಕಲ್ಲು ಕೋರೆಯಿಂದ 450 ಕೆಂಪು ಕಲ್ಲುಗಳನ್ನು ತುಂಬಿಸಿಕೊಂಡು ಬಂದಿರುವುದಾಗಿ ತಿಳಿಸಿದ್ದಾನೆ. ಯಾವುದೇ ಪರವಾನಿಗೆ ಇಲ್ಲದೆ ಕೆಂಪು ಕಲ್ಲನ್ನು ಕಳವು ಮಾಡಿ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಪೊಲೀಸರು ಸೋಮಪ್ಪನನ್ನು ವಶಕ್ಕೆ ಪಡೆದು ಬಂಧಿಸಿ ಕೇಸು ದಾಖಲಿಸಿಕೊಂಡಿದ್ದಾರೆ.








