Friday, May 3, 2024
spot_imgspot_img
spot_imgspot_img

ದೇಹ ಹಾಗೂ ದೇಶವನ್ನು ಸುಸ್ಥಿತಿಯಲ್ಲಿಡೋಣ – ✍️ಮಲ್ಲಿಕಾ ಜೆ ರೈ ಗುಂಡ್ಯಡ್ಕ

- Advertisement -G L Acharya panikkar
- Advertisement -

ಭೂಮಿಯ ಮೇಲೆ ಎಲ್ಲರಿಗೂ ಒಂದೊಂದು ತೆರನಾದ ಭಯ ಇದ್ದೇ ಇರುತ್ತದೆ. ಆದರೂ ಆ ಭಯವನ್ನು ಹೊರಗೆ ತೋರ್ಪಡಿಸಿಕೊಳ್ಳುವುದಿಲ್ಲ. ಆಗ ತಾನೇ ಹುಟ್ಟಿದ ಮಗುವಿಗೆ ಭಯವೇ ಆಗಿ ಅದು ಅಳುವಂತದ್ದು ಕಾರಣವಾಗಿದೆ. ಅಮ್ಮನ ಉದರದಲ್ಲಿ ಹಾಯಾಗಿ ಇದ್ದು ಹೊರಗೆ ಬಂದಾಕ್ಷಣ ವಾತಾವರಣವೇ ಬದಲಾಗಿ ಅಳುವ ಪರಿಸ್ಥಿತಿ ಎಲ್ಲಾ ಮಗುವಿನದ್ದು. ಆದರೆ ಆ ಅಳುವೇ ಹಿರಿಯರಿಗೆ ಎಲ್ಲರಿಗೂ ಸಂತೋಷವನ್ನು ಕೊಡುತ್ತದೆ. ಬೇರೆ ಯಾವುದೇ ಸಮಯದಲ್ಲೂ ಮಗು ಅತ್ತರೆ ಸಂತೋಷವೆಂಬುದು ಬರದು. ಹುಟ್ಟು ಎಂದಾಕ್ಷಣ ಅಲ್ಲಿ ನಾಣ್ಯದ ಒಂದು ಮುಖ ತೆರೆದಂತಾಗುತ್ತದೆ. ಬಳಿಕ ಬೆಳೆದು ದೊಡ್ಡವರಾಗುತ್ತಾ ತಮ್ಮದೇ ಚಿಂತನೆಯಲ್ಲಿ ಮುಂದೆ ಸಾಗಿ ಬದುಕಿನ ಪಯಣವನ್ನು ಸಾಗಿಸುತ್ತಾರೆ. ಆದರೆ ಎಲ್ಲಿಯವರೆಗೆ ಎಂಬ ಅರಿವು ಯಾರಿಗೂ ತಿಳಿದಿರುವುದಿಲ್ಲ. ಹಾಗಾಗಿ ಹುಟ್ಟಿದ ಪ್ರತಿಯೊಂದು ಜೀವಿಗೂ ಅದರದರ ಬಗೆಗಿನ ಪ್ರಾಣಭಯ ಇದ್ದೇ ಇರುತ್ತದೆ. ಪ್ರಾಣ ಭಯ ಯಾರಿಗೆ ಇರುವುದಿಲ್ಲ ಹೇಳಿ ? ಆದರೆ ಕಿಂಚಿತ್ ಹಿಂಸೆ ಅನುಭವಿಸದೇ ಪ್ರಾಣವು ಹೋಗುವುದೆಂದಾದರೆ ಅದು ಆ ಜೀವಿಗೆ ಒದಗುವ ಅದೃಷ್ಟವೋ ಏನೋ ಎನ್ನುವ ಸಂದೇಹ ಕಾಡದೇ ಇರಲಾರದು. ಕೆಲವರು ಇದ್ದಕ್ಕಿದ್ದ ಹಾಗೆ ಕುಸಿದು ಬೀಳುತ್ತಾರೆ. ಪ್ರಾಣ ಪಕ್ಷಿ ಆಗಲೇ ಹಾರಿ ಹೋಗುತ್ತದೆ. ಅದಕ್ಕೆ ಹೀಗೆಯೇ ಎಂಬ ಕಾರಣ ಬೇಕೆಂದಿಲ್ಲ. ಈ ಭೂಮಿಯಲ್ಲಿ ವಾಸಿಸುವ ಪ್ರತಿಜೀವಿಗಳಿಗೂ ಅದರದೇ ಆದ ಬದುಕುವ ಹಕ್ಕನ್ನು ಹೊಂದಿರುತ್ತವೆ. ದೇವರ ಚಿತ್ತ ಯಾರ ಕಡೆಗೆ ವಾಲುತ್ತದೋ ಅಲ್ಲಿ ಒಳಿತಾಗುವ ಲಕ್ಷಣಗಳು ಸಿಗಬಹುದು. ಮೋಕ್ಷವನ್ನು ಕರುಣಿಸಬಹುದು. ನಡೆ ನುಡಿಗಳಲ್ಲಿ ಪಾರದರ್ಶಕತೆ ಇದ್ದಾಗ ಯಾವುದು ಅಸಹಜವೆಂದೆನಿಸದು.

ಯಾಕೆ ಈ ಪ್ರಾಣ ಭಯಪಡುತ್ತದೆ?: ಏನಾದರೂ ಆದರೆ ಯಾರು ಗತಿ? ಏನು ದಿಕ್ಕು? ಎಂಬಂತಹ ಆಲೋಚನೆಗಳು ಕೆಲವೊಮ್ಮೆ ಭಯವನ್ನು ಹೆಚ್ಚಿಸುತ್ತದೆ. ದೇವರು ನಮ್ಮೊಳಗೆ ಇರುವಾಗ ನಾವು ಉಸಿರಾಡುತ್ತೇವೆ. ಎಣಿಸಿದ ಕಾರ್ಯಗಳನ್ನು ಮನಸ್ಸಿನ ಚಿಂತನೆಯಂತೆ ಮಾಡುತ್ತಾ ಕೆಲವೊಮ್ಮೆ ಯಶಸ್ಸು ಪಡೆಯುತ್ತೇವೆ. ಇನ್ನು ಕೆಲವೊಮ್ಮೆ ನಿರ್ಲಿಪ್ತ ಭಾವ ತಳೆಯುತ್ತೇವೆ. ಸಾಧಿಸಲು ಆ ದೇವರು ಅನುವು ಮಾಡಿಕೊಟ್ಟಾಗ ಕಾರ್ಯ ಸಾಂಗವಾಗಿ ನೆರವೇರುತ್ತದೆ.

ಪ್ರಾಣ ಭಯ ಯಾಕಾಗುತ್ತದೆ? ಜಗದಲ್ಲಿರುವ ಸಣ್ಣಪುಟ್ಟ ಕಾರ್ಯಗಳೆಲ್ಲವೂ ಶ್ರೇಷ್ಠವೇ ಆಗಿದೆ. ಆದರೆ ಮನುಷ್ಯ ಮಾತ್ರವೇ ಕೆಲವೊಂದು ಶ್ರೇಷ್ಠ ಕಾರ್ಯಗಳೆಂದೂ, ಇನ್ನು ಕೆಲವನ್ನು ಕನಿಷ್ಠವೆಂದೂ ಮುದ್ರೆಯೊತ್ತಿ ಬಿಟ್ಟಿರುತ್ತಾನೆ . ಆದರೆ ಅದು ಎಂದೂ ಕನಿಷ್ಠತಮವಾಗಿರುವುದಿಲ್ಲ. ಕಾರ್ಯಗಳು ಬೇರೆ ಬೇರೆ ರೂಪದವುಗಳಾಗಿರಬಹುದು. ಈ ಶರೀರವನ್ನೇ ತೆಗೆದುಕೊಳ್ಳುವುದಾದರೆ, ಶರೀರದೊಳಗೆ ನಡೆಯುವ ಪ್ರತಿಯೊಂದೂ ಕಾರ್ಯಗಳೂ ಶ್ರೇಷ್ಠವಾದವುಗಳೇ. ಆಯಾಯ ಅಂಗಗಳು ಆಯಾಯ ಪರಿಧಿಯಲ್ಲಿ ಸರ್ವೋತ್ಕೃಷ್ಟವಾದ ಕಾರ್ಯಗಳನ್ನೇ ಮಾಡಿ ದೇಹವೆಂಬ ಈ ಭೂಪಟವನ್ನು ಅಥವಾ ಸಂಸ್ಕೃತಿಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿ ಸುಸ್ಥಿತಿಯಲ್ಲಿ ಇರಿಸುವಂತೆ ಮಾಡುತ್ತದೆ. ಒಂದು ವೇಳೆ ಯಾವುದೇ ಒಂದು ಭಾಗಕ್ಕೂ ಅಡ್ಡಿ ಅಥವಾ ವ್ಯತ್ಯಾಸಗಳೇನಾದರೂ ಆದಲ್ಲಿ ಅದು ಇಡೀ ದೇಹಕ್ಕೆ ಬಾಧಿಸಲ್ಪಡುತ್ತದೆ ಅಥವಾ ಅನುಭವಕ್ಕೆ ಬರುತ್ತದೆ. ಹಾಗಾಗಿ ಎಲ್ಲವೂ ಸಮನಾಗಿ ತಮ್ಮ ತಮ್ಮ ಕಾರ್ಯಗಳನ್ನು ನಿರ್ವಹಿಸುವಲ್ಲಿ ಸಮಾನತೆಯನ್ನೇ ಸಾರುತ್ತವೆ. ಅದೇ ರೀತಿ ಈ ದೇಶ ಕೂಡಾ. ಎಲ್ಲವೂ ಎಲ್ಲರೂ ಸುಸ್ಥಿತಿಯಲ್ಲಿದ್ದಾಗ ಮಾತ್ರ ದೇಶದಲ್ಲಿ ಸುಸಂಸ್ಕಾರ, ಸುಸಂಸ್ಕೃತಿ ನಿತ್ಯ ನಲಿವಿನಿಂದ ಕೂಡಿರಲು ಸಾಧ್ಯವಾಗುತ್ತದೆ . ಸೋದರ ಭಾವನೆಯು ಪ್ರತಿ ಮನಮನದಲ್ಲೂ ಮೂಡಿ ಬರಬೇಕು. ಆಗ ಮಾತ್ರ ತಾಯಿ ಭಾರತಿ ಸಂತೋಷದಾಯಕವಾಗಿರಲು ಸಾಧ್ಯವಾಗುತ್ತದೆ.

ಭಯದ ವಾತಾವರಣ ನಿರ್ಮಾಣವಾದಂತೆ ಒಳ ಮನಸ್ಸು ಹತೋಟಿ ತಪ್ಪ ತೊಡಗುತ್ತದೆ. ಬದುಕು ಇನ್ನೇನು ಮುಗಿದೇ ಬಿಡುತ್ತದೆ ಎಂಬ ಸಣ್ಣ ಅನುಮಾನದ ಹುತ್ತ ಚಿಗುರೊಡೆಯುತ್ತದೆ. ಹಾಗಾದಾಗಲೇ ಭಯವನ್ನು ನಿರ್ಮೂಲಗೊಳಿಸುವ ಪ್ರಬಲ ಅಸ್ತ್ರವನ್ನೇ ಆಸರೆಯಾಗಿಸಿಕೊಳ್ಳಬೇಕು. ಅದುವೇ ದೇವರ ಧ್ಯಾನವಾಗಿದೆ. ಅದರಿಂದ ಮನಸ್ಸನ್ನು ಕಟ್ಟಿ ಹಾಕಿ ಹೃದಯದೊಳಗೆ ಬಂಧಿಸಿ ಇಡಬೇಕು. ಆಗ ನರನಾಡಿಗಳ ಚಲನೆ, ಪ್ರತೀ ಕಣ ಕಣಗಳೂ ಗೋಚರವಾಗುತ್ತಾ ಬರತೊಡಗುತ್ತವೆ. ಮನದ ಒತ್ತಡಗಳನ್ನು ಆದಷ್ಟೂ ಆಯಾಯ ದಿನವೇ ಇಳಿಸಿ ಬಿಡುತ್ತಲಿರಬೇಕು.

ಅವರು ಹಾಗೆ ಅಂದುಕೊಳ್ಳುತ್ತಾರೆ ಇವರು ಹೀಗೆ ಹೇಳುತ್ತಾರೆ ಅನ್ನುವುದನ್ನು ಎಲ್ಲಾ ಬದಿಗಿಟ್ಟು ಬಿಡಬೇಕು. ಪ್ರತಿಯೊಬ್ಬರೂ ಹಸಿವಾದಾಗ ಎರಡು ತುತ್ತು ಊಟ ಮಾಡುವುದು ಹೊರತು, ಇತರರಲ್ಲಿರುವ ಹಣಕಾಸು, ಅಂತಸ್ತು ಅಲ್ಲವೇ ಅಲ್ಲ. ಹಸಿವು ಚೆನ್ನಾಗಿ ಆಗಲು ಶ್ರಮಪಟ್ಟು ದುಡಿಮೆ ಮಾಡಬೇಕು. ಆಗ ನಮ್ಮರಿವಿಗೆ ಬಾರದಂತೆ ಹಸಿವು ತಾನಾಗಿ ವಕ್ಕರಿಸಿಕೊಳ್ಳುತ್ತದೆ. ಏನೂ ಶ್ರಮ ಪಡದೇ ಕುಳಿತಲ್ಲೇ ಕುಳಿತುಕೊಂಡಿರೆಂದಾದರೆ, ಹೊಟ್ಟೆಗೆ ಮೊದಲು ಆಪತ್ತು ಬರುವುದು. ಎಲ್ಲಾ ರೋಗಗಳಿಗೂ ಮೂಲ ನಾವು ತಿಂದ ಆಹಾರವೇ ಆಗಿರುತ್ತದೆ. ಹೆಚ್ಚು ತಿಂದಿರೋ ಸೋಮಾರಿಯಾಗುವಂತೆ ಮಾಡುತ್ತದೆ . ಕಡಿಮೆ ತಿಂದಿರೋ ಸುಧಾರಿಸಿಕೋ ಅನ್ನುತ್ತದೆ. ಜಾಸ್ತಿ ಇದ್ದರೇನೇ ಎಲ್ಲಾ ಕಡೆಯೂ ಒತ್ತಡ ಹೆಚ್ಚಾಗುವುದು. ಕಡಿಮೆ ಇದ್ದರೆ ಯಾವ ಚಿಂತೆಯೂ ಏನೂ ಮಾಡಲಾಗದು. ಇದು ಎಲ್ಲಾ ವಿಷಯಗಳಿಗೂ ಅನ್ವಯವಾಗುತ್ತದೆ. ಖರ್ಚು ಮಾಡಲು ಹಣ ಸಾಕಷ್ಟು ಇದ್ದರೆ ಮುಲಾಜಿಲ್ಲದೇ ಬೇಕಾದ, ಹಾಗೆಯೇ ಬೇಡವಾದ ವಸ್ತುಗಳನ್ನೆಲ್ಲ ಖರೀದಿಸಿಯೇ ಬಿಡುತ್ತೇವೆ. ಆದರೆ ಮಿತ ಪ್ರಮಾಣದಲ್ಲಿ ಹಣವಿದೆ ಎಂದಾದರೆ, ಕೊಂಚ ಯೋಚನೆ ಮಾಡಿ ಯಾವುದು ತೀರಾ ಅಗತ್ಯವಾಗಿ ಬೇಕಾಗಿರುವುದೋ ಅದನ್ನು ಮಾತ್ರ ಖರೀದಿಸುತ್ತೇವೆ. ಊಟದಲ್ಲೂ ಅಷ್ಟೇ. ಸಾದಾ ಊಟ ಹಸಿವನ್ನು ಸಹಜವಾಗಿ ಇಂಗಿಸುತ್ತದೆ. ಮೃಷ್ಟಾನ್ನ ಭೋಜನ ಅಂದಾಗ ಯಾವುದು ಬೇಕೋ ಅದನ್ನು ತಿನ್ನದೇ ಬೇರೆಲ್ಲದರದೂ ರುಚಿ ಸವಿದು ಬಿಡುತ್ತೇವೆ. ಕಡೆಗೆ ಹೊಟ್ಟೆಗೆ ಆತಂಕ ಎದುರಾಗುವಂತೆ ಮಾಡಿಬಿಡುತ್ತೇವೆ. ಕೇಂದ್ರ ಬಿಂದು ಯಾವಾಗಲೂ ಜಾಗೃತವಾಗಿರಲೇಬೇಕು. ಇಲ್ಲವಾದಲ್ಲಿ ಎಲ್ಲಾ ಕಡೆಯಿಂದಲೂ ಮುತ್ತಿಗೆ ಹಾಕುವವರೇ ಕಾಣಸಿಗುತ್ತಾರೆ. ಹಾಗಾಗಿ ಸಮ ಪ್ರಮಾಣದಲ್ಲಿ ತಿಂದು ಜಾಣರಾಗಿ ದೇಹ ಹಾಗೂ ದೇಶವನ್ನು ಸುಸ್ಥಿತಿಯಲ್ಲಿ ಕಾಪಾಡೋಣ.

- Advertisement -

Related news

error: Content is protected !!