


ಭೋಪಾಲ್: ಮೂರು ತಿಂಗಳ ಹಿಂದೆ ಬಾಲಕಿಯೊಂದಿಗೆ ಪರಾರಿಯಾಗಿದ್ದ ಆರೋಪದ ಹಿನ್ನೆಲೆಯಲ್ಲಿ 16 ವರ್ಷದ ಬಾಲಕನಿಗೆ ನಿರ್ದಯವಾಗಿ ಹಲ್ಲೆ ನಡೆಸಿ, ಮುಖಕ್ಕೆ ಮಸಿ ಬಳಿದು ಸುಮಾರು 1.5 ಕಿಲೋಮೀಟರ್ ದೂರ ಬೆತ್ತಲೆ ಮೆರವಣಿಗೆ ನಡೆಸಿದ ಘಟನೆ ಮಧ್ಯ ಪ್ರದೇಶದ ಉಜ್ಜೈನಿಯಲ್ಲಿ ಗುರುವಾರ ನಡೆದಿದೆ ಎಂದು ವರದಿಯಾಗಿದೆ.
ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮೂರು ತಿಂಗಳ ಹಿಂದೆ ಬಾಲಕ ಮತ್ತು ಬಾಲಕಿ ಪರಾರಿಯಾಗಿದ್ದು, ಎರಡು ವಾರಗಳ ಹಿಂದೆ ಹಿಂದಿರುಗಿದ್ದರು. ಈ ಪ್ರಕರಣದಲ್ಲಿ ಬಾಲಕನನ್ನು ಒಂದು ತಿಂಗಳ ಕಾಲ ಜೈಲಿಗೆ ಕಳುಹಿಸಲಾಗಿದ್ದು, ಬಾಲಕಿಯನ್ನು ಸುಧಾರಣಾ ಕೇಂದ್ರಕ್ಕೆ ಸೇರಿಸಲಾಗಿತ್ತು ಎಂದು ಬಾಲಕ ಹೇಳಿದ್ದಾನೆ.
ಬಾಲಕನ ಹೇಳಿಕೆಯ ಪ್ರಕಾರ, ನಂತರ ಬಾಲಕಿಯ ಸಂಬಂಧಿಕರು ತನ್ನನ್ನು ಗಮನಿಸಿ ಬಲವಂತವಾಗಿ ವಾಹನದಲ್ಲಿ ಕರೆದುಕೊಂಡು ಹೋಗಿ, ಒಂದು ಕೊಠಡಿಯಲ್ಲಿ ಗಂಟೆಗಳ ಕಾಲ ಬಂಧಿಸಿ ಇರಿಸಿದ್ದರು. ಅಲ್ಲಿ ನಿರ್ದಯವಾಗಿ ಥಳಿಸಿ, ಬೆತ್ತಲೆಮಾಡಿ ಮುಖಕ್ಕೆ ಮಸಿ ಬಳಿದು ಸುಮಾರು 1.5 ಕಿಲೋಮೀಟರ್ ದೂರ ಮೆರವಣಿಗೆ ನಡೆಸಿದ್ದರು. ಬಳಿಕ ಈ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಯಿತು.
ಶುಕ್ರವಾರ ಬಾಲಕ ತನ್ನ ಅಂಗವಿಕಲ ತಾಯಿಯೊಂದಿಗೆ ಉಜ್ಜೈನಿಯ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮ್ ಅನ್ನು ಸಂಪರ್ಕಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾನೆ.
ಈ ಕುರಿತು ಪ್ರತಿಕ್ರಿಯಿಸಿದ ಉಜ್ಜೈನಿ ಹೆಚ್ಚುವರಿ ಎಸ್ಪಿ ಅಲೋಕ್ ಶರ್ಮಾ, “ಘಟನೆಗೆ ಸಂಬಂಧಿಸಿ ಪನ್ವಾಸ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಾಲ್ವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.








