


ಮುಂಬೈ : ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಇಂದು (ಶನಿವಾರ) ಸಂಜೆ 5 ಗಂಟೆಗೆ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಎನ್‌ಸಿಪಿ ಮೂಲಗಳಿಂದ ತಿಳಿದುಬಂದಿದೆ.
ಫೆ. 7ರಂದು ನಡೆಯಲಿರುವ ಪುಣೆ ಜಿಲ್ಲಾ ಪಂಚಾಯತ್ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ಮುಂದಿನ ರಾಜಕೀಯ ದಿಕ್ಕು ನಿರ್ಧರಿಸುವ ಉದ್ದೇಶದಿಂದ ಹಿರಿಯ ನಾಯಕರು ಸುನೇತ್ರಾ ಪವಾರ್ ಅವರನ್ನು ಉಪ ಮುಖ್ಯಮಂತ್ರಿ ಸ್ಥಾನಕ್ಕೆ ನೇಮಕ ಮಾಡುವ ಪ್ರಸ್ತಾವನೆ ಮುಂದಿಟ್ಟಿದ್ದಾರೆ ಎನ್ನಲಾಗಿದೆ.
ಪವಾರ್ ಕುಟುಂಬದೊಳಗೆ ಚರ್ಚೆಗಳು ನಡೆದ ಬಳಿಕ ಸುನೇತ್ರಾ ಪವಾರ್ ಉಪ ಮುಖ್ಯಮಂತ್ರಿ ಹುದ್ದೆ ಸ್ವೀಕರಿಸಲು ಸಮ್ಮತಿಸಿದ್ದಾರೆ. ಅಜಿತ್ ಪವಾರ್ ವಹಿಸಿಕೊಂಡಿದ್ದ ಅಬಕಾರಿ ಹಾಗೂ ಕ್ರೀಡಾ ಖಾತೆಗಳನ್ನು ಸುನೇತ್ರಾ ಪವಾರ್ ಅವರು ಮುಂದುವರಿಸಲಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ಈ ಕುರಿತು ಎನ್‌ಸಿಪಿ ಕಚೇರಿಯಲ್ಲಿ ಹಿರಿಯ ನಾಯಕ ಛಗನ್ ಭುಜಬಲ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಸುನೇತ್ರಾ ಪವಾರ್ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಮಾಣ ವಚನ ಸ್ವೀಕರಿಸುವುದಕ್ಕೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದು ವರದಿಯಲ್ಲಿ ತಿಳಿಸಿದ್ದಾರೆ.








